ADVERTISEMENT

ಬಹರೇನ್: 25 ಮಂದಿ ರಾಜಕೀಯ ಕೈದಿಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 16:25 IST
Last Updated 23 ಫೆಬ್ರುವರಿ 2011, 16:25 IST

 ಮನಾಮ/ರಿಯಾದ್ (ಐಎಎನ್‌ಎಸ್): ಬಹರೇನ್ ಪ್ರಭುತ್ವವು 25 ಮಂದಿ ರಾಜಕೀಯ ಕೈದಿಗಳನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿದೆ.

ಪ್ರಭುತ್ವದ ವಿರುದ್ಧ ಚಳವಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ಅಲ್ಲಿನ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರು ಈ ಬಗ್ಗೆ ಸಲಹೆ ಕೇಳಲು ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅದಕ್ಕೂ ಮುನ್ನ ಅವರು ‘ಪಾಪಪ್ರಜ್ಞೆಯಿಂದ ಕೂಡಿದ ಕೈದಿಗಳು’ ಎಂದು ಬಣ್ಣಿಸಿದ್ದ 25 ಮಂದಿ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ ಎಂದು ಸಿಎನ್‌ಎನ್ ವಾಹಿನಿ ವರದಿ ಮಾಡಿದೆ.

ಬಿಡುಗಡೆಗೊಂಡವರಲ್ಲಿ ಅನೇಕರು ಮಾನವ ಹಕ್ಕುಗಳ ಪರ ಹೋರಟಗಾರರು, ಷಿಯಾ ಪಂಗಡದ ಮೌಲ್ವಿಗಳು ಸೇರಿದ್ದಾರೆ.ಇದರಿಂದ ಬಂಧಿಸಲ್ಪಟ್ಟಿದ್ದವರಲ್ಲಿ 100ಕ್ಕೂ ಹೆಚ್ಚು ಮಂದಿ ಬಂಧಮುಕ್ತರಾಗಿದ್ದಾರೆ. ಆದರೆ ಇನ್ನು 400 ಮಂದಿ ಸೆರೆಯಲ್ಲಿದ್ದು, ಇವರ ವಿಚಾರಣೆಯನ್ನು ಸದ್ಯ ಸ್ಥಗಿತಗೊಳಿಸಲಾಗಿದೆ ಎಂದು ಬಹರೇನ್‌ನ ಮಾನವ ಹಕ್ಕುಗಳ ಕೇಂದ್ರ ತಿಳಿಸಿದೆ.

ಷಿಯಾ ಪಂಗಡದ ಮುಸ್ಲಿಮರು ಅಧಿಕವಾಗಿರುವ ಬಹರೇನ್‌ನಲ್ಲಿ ಸುನ್ನಿ ಪಂಗಡಕ್ಕೆ ಸೇರಿದ ರಾಜರ ಆಳ್ವಿಕೆ ಇದೆ. ಕಳೆದ ವಾರದಿಂದ ರಾಜರ ಆಳ್ವಿಕೆಯ ವಿರುದ್ಧ ಚಳವಳಿ ತೀವ್ರಗೊಂಡಿದ್ದು, 10 ಸಾವಿರಕ್ಕೂ ಹೆಚ್ಚು ಮಂದಿ ರ್ಯಾಲಿ ನಡೆಸಿದ್ದಾರೆ.ಚಳವಳಿ ಸಂದರ್ಭದಲ್ಲಿ ಉಂಟಾದ ಗಲಭೆಯಿಂದ ಈವರೆಗೆ ಐವರು ಸಾವನ್ನಪ್ಪಿದ್ದು, 230 ಮಂದಿಗೆ ಗಾಯಗಳಾಗಿವೆ. ಇದರಿಂದ ವಿಚಲಿತರಾದ ರಾಜ ಖಲೀಫಾ ಸೌದಿ ಅರೇಬಿಯಾಗೆ ಸಲಹೆ ಕೇಳಲು ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.