ಕ್ವಾಲಾಲಂಪುರ (ಪಿಟಿಐ): ಬಹುಕೋಟಿ ಹಗರಣದಲ್ಲಿ ಸಿಲುಕಿದ್ದ ಮಲೇಷ್ಯಾ ಪ್ರಧಾನಿ ನಜೀಬ್ ರಜಾಕ್ ಅವರು ಮಂಗಳವಾರ ಆರೋಪ ಮುಕ್ತಗೊಂಡಿದ್ದು, ನಿರಾಳರಾಗಿದ್ದಾರೆ.
681 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹ 4,623 ಕೋಟಿ) ಮೊತ್ತದ ಅವ್ಯವಹಾರ ಪ್ರಕರಣದಲ್ಲಿ ಪ್ರಧಾನಿ ನಜೀಬ್ ರಜಾಕ್ ಅವರು ಆರೋಪ ಮುಕ್ತಗೊಂಡಿದ್ದಾರೆ ಎಂದು ಮಲೇಷ್ಯಾ ಅಟಾರ್ನಿ ಜನರಲ್ ಮೊಹಮ್ಮದ್ ಅಪಂಡಿ ಅಲಿ ಅವರು ಸುದ್ದಿಗೋಷ್ಟಿಯಲ್ಲಿ ಪ್ರಕಟಿಸಿದರು.
ಈ ಪ್ರಕರಣದ ತನಿಖೆಯನ್ನು ಮಲೇಷ್ಯಾದ ಭ್ರಷ್ಟಾಚಾರ ವಿರೋಧಿ ದಳ ನಡೆಸಿತ್ತು.
ಸೌದಿ ಅರೇಬಿಯಾದ ರಾಜಕುಟುಂಬವೊಂದು ನಜೀಬ್ ಅವರ ವೈಯಕ್ತಿಕ ಖಾತೆಗೆ 2013ರ ಮಾರ್ಚ್ ಹಾಗೂ ಏಪ್ರಿಲ್ ನಡುವಣ ಅವಧಿಯಲ್ಲಿ 681 ಮಿಲಿಯನ್ ಅಮೆರಿಕನ್ ಡಾಲರ್ ದೇಣಿಗೆ ನೀಡಿತ್ತು. ಇದು ಕಿಕ್‌ಬ್ಯಾಕ್ ಹಣವಾಗಿದ್ದು, ಈ ಮೂಲಕ ನಜೀಬ್ ಅವರು ಕ್ರಿಮಿನಲ್ ಅಪರಾಧ ಎಸೆಗಿದ್ದಾರೆ ಎಂಬ ಗುರುತರ ಆರೋಪ ಕೇಳಿ ಬಂದಿತ್ತು. ಅಲ್ಲದೇ ಈ ಸಂಬಂಧ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆಯೂ ಅವರ ಮೇಲೆ ಒತ್ತಡ ಹೆಚ್ಚಿತ್ತು.
ಆದರೆ, ದೇಣಿಗೆಯ ಹಿಂದೆ ಯಾವುದೇ ‘ದುರುದ್ದೇಶ’ ಇರುವ ಬಗ್ಗೆ ಸಾಕ್ಷ್ಯಗಳು ಇಲ್ಲ ಎಂದು ತನಿಖೆಯ ವೇಳೆ ಸ್ಪಷ್ಟಗೊಂಡಿದೆ.
‘ನನಗೆ ಲಭ್ಯವಾದ ಸಾಕ್ಷಿಗಳು ಹಾಗೂ ಪೂರಕ ದಾಖಲೆಗಳ ಸಾಕ್ಷ್ಯದ ಆಧಾರದಲ್ಲಿ ದೇಣಿಗೆ ಹಗರಣದಲ್ಲಿ ನಜೀಬ್ ಅವರು ಯಾವುದೇ ಕ್ರಿಮಿನಲ್ ಅಪರಾಧ ಎಸೆಗಿಲ್ಲ. ನಜೀಬ್ ಅವರ ವಿರುದ್ಧದ ಮೂರು ಪ್ರಕರಣಗಳನ್ನು ಸಮಾಪ್ತಿಗೊಳಿಸುವ ಸೂಚನೆಯೊಂದಿಗೆ ಹಗರಣದ ತನಿಖಾ ವರದಿಯನ್ನು ನಾನು ಮಲೇಷ್ಯಾ ಭ್ರಷ್ಟಾಚಾರ ತಡೆ ದಳಕ್ಕೆ ಸಲ್ಲಿಸುವೆ’ ಎಂದೂ ಅಪಂಡಿ ಅಲಿ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.