ADVERTISEMENT

ಬಾಸ್ಟನ್ ಸ್ಫೋಟ ಪ್ರಕರಣ: ತಪ್ಪಿಸಿಕೊಂಡಿದ್ದ ವ್ಯಕ್ತಿಯ ಬಂಧನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 5:22 IST
Last Updated 20 ಏಪ್ರಿಲ್ 2013, 5:22 IST

ಬಾಸ್ಟನ್ (ಪಿಟಿಐ/ಐಎಎನ್‌ಎಸ್): ಇತ್ತೀಚೆಗೆ ಬಾಸ್ಟನ್‌ನಲ್ಲಿ ನಡೆದ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿಸಿಕೊಂಡಿದ್ದ ಶಂಕಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರವಷ್ಟೆ ಅವಳಿ ಸ್ಫೋಟದಲ್ಲಿ ಕೈವಾಡವಿದೆ ಎಂದು ಶಂಕಿಸಲಾದ ಚೆಚನ್ಯಾ ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲು ಯತ್ನಿಸಿದ್ದ ಪೊಲೀಸರೊಂದಿಗೆ ಶಂಕಿತರು ತೀವ್ರ ಗುಂಡಿನ ಚಕಮಕಿ ನಡೆಸಿದ್ದರು. ಪರಿಣಾಮ ಗಾಯಗೊಂಡ ಒಬ್ಬ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.

ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿದ್ದ ಝೋಕರ್ ಸರ್ನೆವ್ ಎಂಬಾತ ಬಾಸ್ಟನ್ ನಗರದ ಪಕ್ಕದ ಪಟ್ಟಣವಾದ ವಾಟರ್ ಫ್ರಂಟ್ ಎಂಬಲ್ಲಿ ದೋಣಿಯ ಮೂಲಕ  ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ವೇಳೆ ನಾಗರಿಕರು ನೀಡಿದ ಮಾಹಿತಿಯನ್ನಾಧಾರಿಸಿ ಪೊಲೀಸರು ಆತನನ್ನು ಸಿನಿಮೀಯ ರೀತಿಯಲ್ಲಿ ಸುತ್ತುವರೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ ಬಂಧಿತ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಶುಕ್ರವಾರ ನಡೆದ ಕಾರ್ಯಾಚರಣೆ ವೇಳೆ ಈತನ ಸಹೋದರನೊಂದಿಗೆ ಈತನೂ ಗಾಯಗೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಈ ಮೂಲಕ ಬಾಸ್ಟನ್, ವಾಟರ್‌ಟೌನ್, ನ್ಯೂಟಾನ್, ವಾಲ್ತ್ಯಮ್ ಹಾಗೂ ಕೇಂಬ್ರಿಡ್ಜ್ ನಗರಗಳ ನಿವಾಸಿಗಳು ನಿಟ್ಟುಸಿರುಬಿಟ್ಟರು. ಈ ನಗರಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದ್ದು, ನಿವಾಸಿಗಳು ಮನೆ ಬಿಟ್ಟು ಹೊರಗೆ ತೆರಳದಂತೆ ಕಟ್ಟುನಿಟ್ಟಾಗಿ ಪೊಲೀಸರು ಸೂಚಿಸಿದ್ದರು.
ಈತನನ್ನು ಬಂಧಿಸಿದ್ದೇ ತಡ ಬಾಸ್ಟನ್ ನಗರಾದ್ಯಂತ ನೂರಾರು ನಾಗರಿಕರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.

ಈ ಮಧ್ಯೆ ಎಫ್‌ಬಿಐ ಅಧಿಕಾರಿಗಳು ನ್ಯೂ ಬೆಡ್‌ಫೋರ್ಡ್ ಹಾಗೂ ಮೆಸಾಚುಸೆಟ್ಸ್‌ಗಳಲ್ಲಿ ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇವರು ಬಾಸ್ಟನ್ ಸ್ಫೋಟ ನಡೆಸಿದ್ದಾರೆಂದು ಹೇಳಲಾದ ಶಂಕಿತರೊಂದಿಗೆ ಸಂಪರ್ಕ ಇರಿಸಿಕೊಂಡಿದ್ದರೆಂದು ಹೇಳಲಾಗುತ್ತಿದೆ.

ಏತನ್ಮಧ್ಯೆ ಚೆಚನ್ಯಾ ದೇಶದ ನಾಯಕರು ಶಂಕಿತ ವ್ಯಕ್ತಿಗೂ ತಮ್ಮ ದೇಶಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT