ವಾಷಿಂಗ್ಟನ್ (ಐಎಎನ್‌ಎಸ್): ಬೆಂಗಳೂರು ಮೂಲದ ಸನ್ನಿ ರಾಮಸ್ವಾಮಿ (ಸನತ್‌ಕುಮಾರ್ ರಾಮಸ್ವಾಮಿ) ಅವರನ್ನು ಅಮೆರಿಕ ಸರ್ಕಾರದ ಪ್ರಮುಖ ಹುದ್ದೆಗೆ ಅಧ್ಯಕ್ಷ ಬರಾಕ್ ಒಬಾಮ ನೇಮಕ ಮಾಡಿದ್ದಾರೆ.
ಸನ್ನಿ ರಾಮಸ್ವಾಮಿ ಅವರನ್ನು ಅಮೆರಿಕದ ರಾಷ್ಟ್ರೀಯ ಆಹಾರ ಮತ್ತು ಕೃಷಿ ಸಂಸ್ಥೆಯ (ಎನ್‌ಐಎಫ್‌ಎ) ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
ಬೆಂಗಳೂರಿನ ಸೇಂಟ್ ಜೋಸೆಫ್ ಇಂಡಿಯನ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಓದಿದ ಸನತ್‌ಕುಮಾರ್ ರಾಮಸ್ವಾಮಿ ಅವರು ಬಳಿಕ ಹೆಬ್ಬಾಳದಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದರು.
ನಂತರ ಪಿಎಚ್.ಡಿ. ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿದ ರಾಮಸ್ವಾಮಿ ಅವರು ವ್ಯಾಸಂಗದ ಬಳಿಕ ಅಲ್ಲೇ ನೆಲೆಸಿ, ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ರಾಮಸ್ವಾಮಿ ಅವರು ಕರ್ನಾಟಕದ ಮಾಜಿ ಪೊಲೀಸ್ ಮಹಾನಿರ್ದೇಶಕ ಬಿ.ಎನ್. ಗರುಡಾಚಾರ್ ಅವರ ಸಹೋದರ ದಿವಂಗತ ಕ್ಯಾಪ್ಟನ್ ರಾಮಸ್ವಾಮಿ ಅವರ ಪುತ್ರರಾಗಿದ್ದಾರೆ.
ಇದೇ ಸಂದರ್ಭದಲ್ಲಿ, ಮತ್ತೊಬ್ಬ ಭಾರತೀಯ ಮೂಲದ ಮಹಿಳೆ ಪೌಲಾ ಗಂಗೋಪಾಧ್ಯಾಯ ಅವರನ್ನು ಅಮೆರಿಕದ ಪ್ರತಿಷ್ಠಿತ ರಾಷ್ಟ್ರೀಯ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸೇವೆಗಳ ಮಂಡಳಿಯ ಸದಸ್ಯರನ್ನಾಗಿ ಒಬಾಮ ನೇಮಿಸಿದ್ದಾರೆ.
ಈ ಮೂಲಕ, ಒಬಾಮ ಆಡಳಿತದಲ್ಲಿ ಉನ್ನತ ಹುದ್ದೆ ಅಲಂಕರಿಸಿರುವ ಭಾರತೀಯ ಮೂಲದವರ ಸಂಖ್ಯೆ 15ಕ್ಕೆ ಏರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.