ADVERTISEMENT

ಬ್ರಹ್ಮಪುತ್ರಾ ನೀರು ಹಂಚಿಕೆ ಭಾರತಕ್ಕೆ ಭಯ ಬೇಡ....

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ಬೀಜಿಂಗ್, (ಪಿಟಿಐ): ಗಡಿಯಾಚೆಗಿನ ನದಿ ನೀರು ಹಂಚಿಕೆ ನಿಯಮಗಳಿಗನುಗುಣವಾಗಿಯೇ ಕಾರ್ಯ ನಿರ್ವಹಿಸುವುದಾಗಿ ಚೀನಾ ಭಾರತಕ್ಕೆ ಸ್ಪಷ್ಟನೆ ನೀಡಿದೆಯಲ್ಲದೆ ಇದೇ ವೇಳೆ ನದಿ ಹರಿಯುವ ಇತರ ದೇಶಗಳ ಮೇಲುಂಟಾಗುವ ಪರಿಣಾಮವನ್ನೂ ಗಮನಕ್ಕೆ ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದೆ.

ಬರ ಪೀಡಿತ ಪ್ರದೇಶಕ್ಕೆ ನೀರು ಒದಗಿಸುವ ಸಲುವಾಗಿ ಬ್ರಹ್ಮಪುತ್ರಾ ನದಿಗೆ ಅಣೆಕಟ್ಟೆ ಕಟ್ಟುವ ಚೀನಾದ ನಿರ್ಧಾರಕ್ಕೆ ಕಳವಳಗೊಂಡಿರುವ ಭಾರತ,  ಈ ಕುರಿತು ಮಾಹಿತಿ ಕೋರಿದ್ದರ ಹಿನ್ನೆಲೆಯಲ್ಲಿ ಚೀನಾ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.

ನೀರಿನ ಬಳಕೆ ಕುರಿತಂತೆ ಚೀನಾ ಜವಾಬ್ದಾರಿಯುತವಾದ ನಿಲುವನ್ನು ತೆಗೆದುಕೊಂಡಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.ತಮ್ಮಲ್ಲಿನ ನದಿ ನೀರಿನ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವುದಾಗಿ ಚೀನಾ ತಿಳಿಸಿದೆಯಲ್ಲದೆ ನೀರು ಹಂಚಿಕೆಯಿಂದ ಇತರ ದೇಶಗಳ ಮೇಲಾಗುವ ಪರಿಣಾಮವನ್ನೂ ಗಮನದಲ್ಲಿಡುವುದಾಗಿ  ವಕ್ತಾರರು ತಿಳಿಸಿದ್ದಾರೆ.

`ಸರ್ಕಾರವು ಅಣೆಕಟ್ಟೆ ಕುರಿತಂತೆ ಮಾಹಿತಿಯನ್ನು ಕೇಳಿದ್ದು ಅದು ದೊರೆತೊಡನೆ ಸೂಕ್ತ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು~ ಎಂದು ವಿದೇಶಾಂಗ ವ್ಯವಹಾರ ಖಾತೆ ಸಚಿವ ಎಸ್. ಎಂ. ಕೃಷ್ಣ ಇದೇ ವೇಳೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.