ಲಂಡನ್ (ಪಿಟಿಐ): ಬ್ರಿಟನ್‌ನಲ್ಲಿರುವ ಇತರ ಜನಾಂಗೀಯ ಅಲ್ಪಸಂಖ್ಯಾತರಿಗೆ ಹೋಲಿಸಿದರೆ ಭಾರತ ಮೂಲದ ಸಮುದಾಯದವರು ಹೆಚ್ಚು ಸುಶಿಕ್ಷಿತರು ಮತ್ತು ಕಡಿಮೆ ನಿರುದ್ಯೋಗಿಗಳು ಎಂದು ಗುರುವಾರ ಬಿಡುಗಡೆಯಾದ ಹೊಸ ಅಧ್ಯಯನ ವರದಿ ಹೇಳಿದೆ.
ಆದರೆ ದೇಶದಲ್ಲಿ ಬೇರೂರಿರುವ ಜನಾಂಗ ವಿಭಜನೆ ಪಿಡುಗನ್ನು ನಿವಾರಿಸಲು ಬ್ರಿಟನ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದೂ ವರದಿ ಎಚ್ಚರಿಕೆ ನೀಡಿದೆ. ಕೆಲವು ಪ್ರಕರಣಗಳಲ್ಲಿ, ಭಾರತೀಯರು ಹೆಚ್ಚಿನ ಪ್ರಮಾಣದ ಪದವಿ ಹಂತದ ಶಿಕ್ಷಣದ ಮೂಲಕ ಬ್ರಿಟಿಷ್ ಪ್ರಜೆಗಳನ್ನೂ ಹಿಂದಿಕ್ಕಿದ್ದಾರೆ.
‘ಎಲ್ಲಾ ಜನಾಂಗೀಯ ಸಮುದಾಯಗಳಲ್ಲಿ ಪದವಿ ಮಟ್ಟದ ವಿದ್ಯಾರ್ಹತೆಯಲ್ಲಿ ಹೆಚ್ಚಳ ಕಂಡುಬಂದಿದೆ. ಇದರಲ್ಲಿ ಬಿಳಿ ವರ್ಣೀಯರ ಪ್ರಮಾಣ ಶೇ 5.9 ರಷ್ಟಿದ್ದರೆ ಭಾರತೀಯರ ಪ್ರಮಾಣ ಶೇ 18.1 ಇದೆ’ ಎಂದು ಬ್ರಿಟನ್‌ನ ಸಮಾನತೆ ಮತ್ತು ಮಾನವ ಹಕ್ಕುಗಳ ಆಯೋಗ ಬಿಡುಗಡೆ ಮಾಡಿರುವ ವರದಿ ಹೇಳಿದೆ.
‘ಬ್ರಿಟನ್ ವಿಭಜನೆಯ ಸೂತ್ರ: ಸಮಗ್ರ ಜನಾಂಗೀಯ ಸಮಾನತೆಯ ಕಾರ್ಯತಂತ್ರ’ ಎಂಬ ಶೀರ್ಷಿಕೆಯ ಈ ವರದಿಯಲ್ಲಿ ಜನಾಂಗೀಯ ವಿಭಜನೆ ಮತ್ತು ದೇಶಕ್ಕೆ ಅದರಿಂದ ಎದುರಾಗುವ ಅಪಾಯವನ್ನು ವಿವರಿಸಲಾಗಿದೆ.
‘ಜನಾಂಗೀಯ ಅಸಮಾನತೆಯನ್ನು ನಿವಾರಿಸಲು ದುಪ್ಪಟ್ಟು ಶ್ರಮ ವಹಿಸಬೇಕಾದ ತುರ್ತು ನಮ್ಮ ಮುಂದಿದೆ. ಇದಕ್ಕೆ ತಪ್ಪಿದರೆ ಸಮಾಜದಲ್ಲಿ ಒಡಕು ಮೂಡುವ ಅಪಾಯ ಹೆಚ್ಚಿ ಜನಾಂಗೀಯ ಬಿಕ್ಕಟ್ಟುಗಳೂ ಹೆಚ್ಚಲಿವೆ’ ಎಂದು ಆಯೋಗದ ಅಧ್ಯಕ್ಷ ಡೇವಿಕ್ ಐಸಾಕ್ ಅವರು ವರದಿಯಲ್ಲಿ ಗಂಭೀರ ಎಚ್ಚರಿಕೆ ನೀಡಿದ್ದಾರೆ.
‘ಆಧುನಿಕ ಬ್ರಿಟನ್‌ನಲ್ಲಿ ನೀವು ಕಪ್ಪು ವರ್ಣೀಯರೋ ಜನಾಂಗೀಯ ಅಲ್ಪಸಂಖ್ಯಾತರೋ ಆಗಿದ್ದರೆ ಒಂದು ಪ್ರತ್ಯೇಕ ಜಗತ್ತಿನಲ್ಲಿ ಬದುಕುತ್ತಿರುವಂತೆ ನಿಮಗೆ ಭಾಸವಾಗುತ್ತದೆಯೇ ವಿನಾ ಒಂದು ರಾಷ್ಟ್ರ, ಸಮಾಜ ಎಂಬ ಭಾವನೆ ಬರುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ಸರ್ಕಾರದಿಂದ ಕ್ರಮ: ‘ಜನಾಂಗೀಯ ಸಮಾನತೆ ಕಾಪಾಡುವ ಉದ್ದೇಶದಿಂದ ಉದ್ಯೋಗ, ವಿಶ್ವವಿದ್ಯಾಲಯಗಳ ನೇಮಕಾತಿ, ಪ್ರಶಿಕ್ಷಣ ಕಾರ್ಯಕ್ರಮ, ಸ್ಟಾರ್ಟ್ ಅಪ್ ಸಾಲಗಳು ಮತ್ತು ಪೊಲೀಸ್ ಹಾಗೂ ಸಶಸ್ತ್ರ ಪಡೆಗಳಲ್ಲಿನ ನೇಮಕಾತಿಯಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ’ ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ.
ಕಪ್ಪು ವರ್ಣೀಯರ ಸ್ಥಿತಿಗೆ ಕಳವಳ
* ಬ್ರಿಟನ್‌ನಲ್ಲಿ ಅಪರಾಧ ಪ್ರಕರಣಗಳಲ್ಲಿ ಹೆಚ್ಚು ಬಲಿಪಶುಗಳಾಗುವುದು ಕಪ್ಪು ವರ್ಣೀಯರು
* ಅವರ ಅಪರಾಧ ಸಾಬೀತಾಗುವ ಪ್ರಮಾಣ ಬಿಳಿ ವರ್ಣೀಯರಿಗಿಂತ ಮೂರು ಪಟ್ಟು ಹೆಚ್ಚು
* ಅಧಿಕಾರಯುತ ಸ್ಥಾನಗಳಲ್ಲಿ ಕಪ್ಪು ವರ್ಣೀಯರಿಗೆ ಕನಿಷ್ಠ ಅವಕಾಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.