ADVERTISEMENT

ಬ್ರಿಟನ್ ಸಂಸತ್ತಿನಲ್ಲಿ ಅಶ್ಲೀಲ ವೆಬ್‌ಸೈಟ್‌ಗಳ ವೀಕ್ಷಣೆ!

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಲಂಡನ್ (ಐಎಎನ್‌ಎಸ್): ಬ್ರಿಟನ್ ಸಂಸತ್ತಿನಲ್ಲಿ ಸಂಸದರು ಮತ್ತು ಇತರ ಸಿಬ್ಬಂದಿ ತಮ್ಮ ಕಂಪ್ಯೂಟರ್‌ಗಳನ್ನು ಕಾಮಪ್ರಚೋದಕ ಅಂಶಗಳನ್ನೊಳಗೊಂಡ ವೆಬ್‌ಸೈಟ್‌ಗಳಿಗೆ ಭೇಟಿ ನೀಡಲು ಬಳಸುತ್ತಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಮೂರು ಲಕ್ಷಕ್ಕೂ ಅಧಿಕ ಬಾರಿ ಅಶ್ಲೀಲ ವೆಬ್‌ತಾಣಗಳಿಗೆ ಭೇಟಿ ನೀಡಲಾಗಿದೆ ಎಂದು `ಡೈಲಿ ಮೇಲ್' ಪತ್ರಿಕೆ ವರದಿ ಮಾಡಿದೆ.

2012 ಮತ್ತು 2013ರ ಅವಧಿಯಲ್ಲಿ ಕಂಪ್ಯೂಟರ್ ಬಳಕೆದಾರರು ದಿನಂಪ್ರತಿ 820 ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದ್ದಾರೆ ಎಂದು ಬ್ರಿಟನ್ ಸಂಸತ್ ಭವನದ ಮಾಹಿತಿ ತಂತ್ರಜ್ಞಾನ ಇಲಾಖೆ ನೀಡಿರುವ ಮಾಹಿತಿಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

`ಸಂಸತ್ತಿನಲ್ಲಿ ಕಾರ್ಯನಿರ್ವಹಿಸುವವರು ತಮ್ಮ ಕೆಲಸಕ್ಕೆ ಅಗತ್ಯವಿಲ್ಲದ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಾರೆ ಎಂಬ ಸಂಗತಿ ಈ ಮಾಹಿತಿಗಳಿಂದ ಮನದಟ್ಟಾಗುತ್ತದೆ' ಎಂದು ತೆರಿಗೆದಾರರ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಮ್ಯಾಥ್ಯೂ ಸಿಂಕ್ಲೇರ್ ಹೇಳಿದ್ದಾರೆ.

`ಪ್ರಶ್ನಾರ್ಹ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಾ ಸಂಸದರು ಸಮಯ ಹಾಳು ಮಾಡುವುದನ್ನು ತೆರಿಗೆದಾರರು ಬಯಸುವುದಿಲ್ಲ. ತಾವು ಆಯ್ಕೆ ಮಾಡಿರುವ ಜನಪ್ರತಿನಿಧಿಗಳು ಹಾಗೂ ಅವರ  ಸಿಬ್ಬಂದಿ  ಅತ್ಯಂತ ಮಹತ್ವದ ಕೆಲಸ ಮಾಡುವುದನ್ನು ಜನರು ಅಪೇಕ್ಷಿಸುತ್ತಾರೆ' ಎಂದು ಸಿಂಕ್ಲೇರ್ ಅಭಿಪ್ರಾಯ ಪಟ್ಟಿದ್ದಾರೆ.

ಕಂಪ್ಯೂಟರ್ ಬಳಕೆದಾರರು ಉದ್ದೇಶ ಪೂರ್ವಕವಾಗಿಯೇ ಅಶ್ಲೀಲ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದ್ದಾರೆ ಎಂಬುದು ಸಾಬೀತಾಗಿಲ್ಲ ಎಂದು ಹೌಸ್ ಆಫ್ ಕಾಮನ್ಸ್‌ನ ವಕ್ತಾರರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.