ADVERTISEMENT

ಬ್ರಿಟಾನಿಕಾ ವಿಶ್ವಕೋಶ: ಡಿಜಿಟಲ್ ಪೆಟ್ಟು- ಮುದ್ರಣ ಆವೃತ್ತಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 9:30 IST
Last Updated 14 ಮಾರ್ಚ್ 2012, 9:30 IST
ಬ್ರಿಟಾನಿಕಾ ವಿಶ್ವಕೋಶ: ಡಿಜಿಟಲ್ ಪೆಟ್ಟು- ಮುದ್ರಣ ಆವೃತ್ತಿ ಸ್ಥಗಿತ
ಬ್ರಿಟಾನಿಕಾ ವಿಶ್ವಕೋಶ: ಡಿಜಿಟಲ್ ಪೆಟ್ಟು- ಮುದ್ರಣ ಆವೃತ್ತಿ ಸ್ಥಗಿತ   

ನ್ಯೂಯಾರ್ಕ್ (ಪಿಟಿಐ): ವಿಶ್ವದಾದ್ಯಂತ ಮನೆಗಳಲ್ಲಿ ಹಾಗೂ ಗ್ರಂಥಾಲಯಗಳಲ್ಲಿ ಆಕರ ಗ್ರಂಥವಾಗಿ ಬಳಕೆಯಾಗುತ್ತಿರುವ ~ಬ್ರಿಟಾನಿಕಾ ವಿಶ್ವಕೋಶ~ (ಎನ್ ಸೈಕ್ಲೋಪೀಡಿಯಾ ಬ್ರಿಟಾನಿಕಾ~ 244 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತನ್ನ ಮುದ್ರಣ ಆವೃತ್ತಿಯನ್ನು ಸ್ಥಗಿತಗೊಳಿಸಲಿದ್ದು, ಡಿಜಿಟಲ್ ಆವೃತ್ತಿಗಳತ್ತ ಗಮನ ಹರಿಸಲಿದೆ.

1768ರಲ್ಲಿ ಸ್ಕಾಟ್ಲೆಂಡಿನಲ್ಲಿ ಪುಸ್ತಕರೂಪದಲ್ಲಿ ಮೊತ್ತ ಮೊದಲ ಬಾರಿಗೆ ಪ್ರಕಟಗೊಂಡಿದ್ದ ಈ ವಿಶ್ವಕೋಶವು ಲಭ್ಯವಿರುವ ಹಾಲಿ ಪುಸ್ತಕ ರೂಪದ ಆವೃತ್ತಿಗಳು ಮಾರುಕಟ್ಟೆಗಳಲ್ಲಿ ಮಾರಾಟವಾದ ಬಳಿಕ ಪುಸ್ತಕ ರೂಪದ ಪ್ರಕಟಣೆಯನ್ನು ಸ್ಥಗಿತಗೊಳಿಸುವುದು ಎಂದು ಷಿಕಾಗೋ ಮೂಲದ ಕಂಪೆನಿ ಬುಧವಾರ ಪ್ರಕಟಿಸಿದೆ.

32 ಸಂಪುಟಗಳ ವಿಶ್ವಕೋಶದ ಗ್ರಂಥರೂಪದ ಕೊನೆಯ ಅವೃತ್ತಿ 2010ನೇ ಇಸವಿಯದಾಗಲಿದೆ. ಆದರೆ ಈಗಾಗಲೇ ಪ್ರಕಟಗೊಂಡಿರುವ ಸುಮಾರು 4000 ಕಟ್ಟುಗಳ ಮಾರಾಟ ಮುಂದುವರೆಯಲಿದೆ ಎಂದು ಕಂಪೆನಿ ಹೇಳಿದೆ.

32 ಸಂಪುಟಗಳ ವಿಶ್ವಕೋಶದ ಮುದ್ರಣ ಆವೃತ್ತಿಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂಬ ಪ್ರಕಟಣೆ ಅತ್ಯಂತ ಮಹತ್ವದ್ದು ಏಕೆಂದರೆ ನಮ್ಮ ಭೂತಕಾಲದ ವಿಚಾರಕ್ಕಾಗಿ ಅಲ್ಲ, ಭವಿಷ್ಯದಲ್ಲಿ ಇನ್ನಷ್ಟು ಪರಿಣಾಮಕಾರಿಯಾದ ಯೋಜನೆಗಳನ್ನು ನಾವು ಹಮ್ಮಿಕೊಳ್ಳುತ್ತಿದ್ದೇವೆ ಎಂಬ ಕಾರಣಕ್ಕಾಗಿ ಈ ಪ್ರಕಟಣೆ ಅತ್ಯಂತ ಮಹತ್ವದ್ದು ಎಂದು ಕಂಪೆನಿಯ ಅಧ್ಯಕ್ಷ ಜಾರ್ಜ್ ಕೌಝ್ ~ಲುಕಿಂಗ್ ಅಹೆಡ್~ ಶೀರ್ಷಿಕೆಯ ತಮ್ಮ ಬ್ಲಾಗ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

1990ರಲ್ಲಿ ಬ್ರಿಟಾನಿಕಾ ವಿಶ್ವಕೋಶದ 1,20,000 ಕಟ್ಟುಗಳು ವಿಶ್ವದಾದ್ಯಂತ ಮಾರಾಟವಾಗಿದ್ದವು. ಇದೇ ವಿಶ್ವಕೋಶ ಸಂಪುಟಗಳ ಗರಿಷ್ಠ ಮಾರಾಟವಾಗಿತ್ತು. ಆದರೆ ಆರು ವರ್ಷಗಳ ಬಳಿಕ 40,000 ಕಟ್ಟುಗಳಷ್ಟು ಮಾರಾಟ ಕುಸಿಯಿತು. ಪ್ರಸ್ತುತ ಮಾರುಕಟ್ಟೆಯಲ್ಲಿರುವ ದಪ್ಪ ಹೊರಕವಚದ ಗ್ರಂಥದ ಬೆಲೆ 1395 ಅಮೆರಿಕನ್ ಡಾಲರುಗಳು.

ಮುದ್ರಣ ಆವೃತ್ತಿಗಳ ಮಾರಾಟ ಕುಸಿತಗೊಳ್ಳುತ್ತಿರುವುದು ಹೌದು ಎಂಬುದಾಗಿ ಒಪ್ಪಿಕೊಂಡ ಕೌಝ್ ~ಗೂಗಲ್ ಮತ್ತು ವಿಕಿಪೀಡಿಯಾಗಳ ಅಂತರ್ಜಾಲ ಶೋಧ ಯಂತ್ರಗಳಿಂದ ದೊಡ್ಡ ಪ್ರಮಾಣದ ಪೈಪೋಟಿ ಬಂದದ್ದೇ ಮುದ್ರಣ ಆವೃತ್ತಿಗಳ ಪ್ರಕಟಣೆ ಕೊನೆಗೊಳಿಸಲು ಮುಖ್ಯ ಕಾರಣವಾಗಿದ್ದರೂ, ಇದಕ್ಕೂ ಗೂಗಲ್ ಮತ್ತು ವಿಕಿಪೀಡಿಯಾಕ್ಕೂ ಯಾವುದೇ ಸಂಬಂಧವೂ ಇಲ್ಲ. ನಾವು ಬ್ರಿಟಾನಿಕಾವನ್ನು ಡಿಜಿಟಲ್ ಉತ್ಪನ್ನವಾಗಿ ಮಾರಾಟ ಮಾಡಬಯಸುತ್ತಿದ್ದೇವೆ~ ಎಂದು ಸ್ಪಷ್ಟ ಪಡಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.