ADVERTISEMENT

ಭಾರತೀಯ ರಾಯಭಾರಿ ಕಚೇರಿ ಬಳಿ ಸ್ಫೋಟ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 13:48 IST
Last Updated 3 ಆಗಸ್ಟ್ 2013, 13:48 IST

ಪೇಶಾವರ/ನವದೆಹಲಿ (ಪಿಟಿಐ) : ಅಫ್ಘಾನಿಸ್ತಾನದ ಜಲಾಲಾಬಾದ್ ನಗರದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಬಳಿ ಶನಿವಾರ ಬಾಂಬ್ ಒಂದು ಸ್ಫೋಟಗೊಂಡ ಪರಿಣಾಮ 12 ಮಂದಿ ಸಾವನ್ನಪ್ಪಿದ್ದು, 21ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ನವದೆಹಲಿಯಲ್ಲಿರುವ ಭಾರತೀಯ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.

ಇದೇ ವೇಳೆ ಭಾರತೀಯ ಅಧಿಕಾರಿಗಳೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಭಾರತೀಯ ರಾಯಭಾರಿ ಕಚೇರಿಗೆ 200 ಮೀಟರ್ ದೂರದಲ್ಲಿ ಕಾರ್ ಒಂದರಲ್ಲಿ ಬಾಂಬ್ ಇಟ್ಟು ಸ್ಫೋಟಿಸಲಾಗಿದೆ ಎಂದುನನ್‌ಗರ್ ಹಾರ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಜನರಲ್ ಶರೀಫ್ ಅಮಿನ್ ಅವರು ತಿಳಿಸಿದ್ದಾರೆ. 

ಈ ಮಧ್ಯೆ ರಾಯಭಾರಿ ಕಚೇರಿಗೆ ಯಾವುದೇ ಹಾನಿಯಾಗಿಲ್ಲ. ಭಾರತದ ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಮೂಲಗಳು ಕ್ಸಿನುವಾ ಸುದ್ದಿ ಸಂಸ್ಥೆಗೆ ತಿಳಿಸಿವೆ.

ಆಫ್ಘಾನ್ ರಕ್ಷಣಾ ತಂಡವು ಘಟನಾ ಸ್ಥಳವನ್ನು ಸುತ್ತುವರಿದಿದ್ದು ಹಲವು ಆಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ.

'ಜಲಾಲಾಬಾದ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಬಳಿ ಬಾಂಬ್ ಸ್ಫೋಟಗೊಂಡಿದೆ. ಭಾರತೀಯ ಅಧಿಕಾರಿಗಳೆಲ್ಲರೂ ಸುರಕ್ಷಿತರಾಗಿದ್ದಾರೆ' ಎಂದು ನವದೆಹಲಿಯಲ್ಲಿರುವ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಸಯ್ಯದ್ ಅಕ್ಬರುದ್ದೀನ್ ತಮ್ಮ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಸ್ಫೋಟದಿಂದಾಗಿ ರಾಯಭಾರಿ ಕಚೇರಿ ಬಳಿ ದಟ್ಟವಾದ ಹೊಗೆ ಆವರಿಸಿದ್ದು, ಹಲವು ಮನೆಗಳು ಮತ್ತು ಅಂಗಡಿಮುಂಗಟ್ಟುಗಳಿಗೆ ಹಾನಿಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.