ADVERTISEMENT

ಭಾರತ-ಅಮೆರಿಕ ರಕ್ಷಣಾ ಸಹಭಾಗಿತ್ವ

​ಪ್ರಜಾವಾಣಿ ವಾರ್ತೆ
Published 14 ಜೂನ್ 2012, 19:30 IST
Last Updated 14 ಜೂನ್ 2012, 19:30 IST
ಭಾರತ-ಅಮೆರಿಕ ರಕ್ಷಣಾ ಸಹಭಾಗಿತ್ವ
ಭಾರತ-ಅಮೆರಿಕ ರಕ್ಷಣಾ ಸಹಭಾಗಿತ್ವ   

ವಾಷಿಂಗ್ಟನ್ (ಪಿಟಿಐ): ಭಾರತ ಮತ್ತು ಅಮೆರಿಕ ನಡುವೆ ರಕ್ಷಣಾ ತಂತ್ರಜ್ಞಾನ ವರ್ಗಾವಣೆ, ರಕ್ಷಣಾ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಉಭಯ ರಾಷ್ಟ್ರಗಳ ಮಧ್ಯೆ ರಕ್ಷಣಾ ಒಪ್ಪಂದಗಳನ್ನು ಮತ್ತಷ್ಟು ವಿಸ್ತರಿಸುವುದಾಗಿ ಭಾರತ ತಿಳಿಸಿದೆ.

`ರಕ್ಷಣಾ ತಂತ್ರಜ್ಞಾನ ವರ್ಗಾವಣೆ ವಿಷಯವನ್ನು ನಾನು ಹಾಗೂ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಬೆಂಬಲಿಸುತ್ತೇವೆ~ ಎಂದು ವಿದೇಶಾಂಗ ವ್ಯವಹಾರ ಸಚಿವ ಎಸ್. ಎಂ. ಕೃಷ್ಣ ಅವರು ಹಿಲರಿ ಅವರೊಂದಿಗೆ ಗುರುವಾರ ಇಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ವಿದೇಶಾಂಗ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಜರುಗಿದ ಉಭಯ ರಾಷ್ಟ್ರಗಳ ನಡುವಿನ ಮೂರನೇ ದ್ವಿಪಕ್ಷೀಯ ಮಾತುಕತೆಯ ಮುಖ್ಯ ಅಂಶಗಳನ್ನು ಕೃಷ್ಣ ಹಾಗೂ ಕ್ಲಿಂಟನ್ ವಿವರಿಸಿದರು.

ಸಹಕಾರ: ಇದೇ ವೇಳೆ `ಸೇನಾ ಶಸ್ತ್ರಾಸ್ತ್ರಗಳ ಮಾರಾಟ, ಸೇನಾ ಕ್ಷೇತ್ರದಲ್ಲಿ ಜಂಟಿ ಸಂಶೋಧನೆ, ಉತ್ಪಾದನೆ ಮತ್ತು ಅಭಿವೃದ್ಧಿಯಲ್ಲಿ ಪರಸ್ಪರ ಸಹಕಾರ ನೀಡುವ ಮೂಲಕ ಭಾರತ ಮತ್ತು ಅಮೆರಿಕ ತಮ್ಮ ರಕ್ಷಣಾ ಸಹಭಾಗಿತ್ವವನ್ನು ಮುಂದುವರಿಸಲಿವೆ~ ಎಂದು ಅಮೆರಿಕ  ವಿದೇಶಾಂಗ ಇಲಾಖೆಯ ಅಂಕಿ-ಅಂಶಗಳು ತಿಳಿಸಿವೆ.
ಇದಕ್ಕೂ ಮುನ್ನ ದ್ವಿಪಕ್ಷೀಯ ಮಾತುಕತೆಗೆ ಸಂಬಂಧಿಸಿ ಮಾತನಾಡಿದ ಹಿಲರಿ, ಉಭಯ ರಾಷ್ಟ್ರಗಳ ಸೇನಾ ಪಡೆಗಳು ಜಂಟಿ ಕವಾಯತು ನಡೆಸಲಿವೆಯಲ್ಲದೆ, ಕಡಲ್ಗಳ್ಳತನ ತಡೆಯುವಲ್ಲಿಯೂ ಪರಸ್ಪರ ಸಹಕಾರ ನೀಡಲಿವೆ ಎಂದರು.

ಕಳೆದ ವರ್ಷ ದ್ವಿಪಕ್ಷೀಯ ರಕ್ಷಣಾ ವ್ಯಾಪಾರವು 8 ಶತಕೋಟಿ ಡಾಲರ್ ಮೀರಿದ್ದು, ಮುಂದೆಯೂ ಇದು ಮುಂದುವರಿಯಲಿದೆ ಎಂದು ಅವರು ಹೇಳಿದರು.

ಆಫ್ಘನ್ ಪ್ರಸ್ತಾಪ: ಕೃಷಿ, ಗಣಿಗಾರಿಕೆ, ಇಂಧನ ಮತ್ತು ಮೂಲಸೌಕರ್ಯ ಸೇರಿದಂತೆ ಯುದ್ಧ ಪೀಡಿತ ಅಫ್ಘಾನಿಸ್ತಾನದ ಅಭಿವೃದ್ಧಿಯ ಸಾಧ್ಯತೆಗಳನ್ನು ಪತ್ತೆ ಹಚ್ಚುವುದಕ್ಕೆ ಸಂಬಂಧಿಸಿದಂತೆ ಅದರೊಂದಿಗೆ ತ್ರಿಪಕ್ಷೀಯ ಮಾತುಕತೆ ನಡೆಸಲು ಭಾರತ ಮತ್ತು ಅಮೆರಿಕ ಸಹಮತ ಸೂಚಿಸಿವೆ.

ಮಾತುಕತೆಗೆ ತಡೆ: 2008ರ ಮುಂಬೈ ದಾಳಿಯ ಸೂತ್ರಧಾರರು ಪಾಕಿಸ್ತಾನವನ್ನು `ಭಾರತ ವಿರೋಧಿ ಕಾರ್ಯ~ಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೃಷ್ಣ ಹೇಳಿದರು.

`ದಕ್ಷಿಣ ಏಷ್ಯಾದ ವಿರೋಧಿ ರಾಷ್ಟ್ರಗಳ ನಡುವಿನ ಶಾಂತಿ ಮಾತುಕತೆ ಮುಂದುವರಿಯುತ್ತಿದ್ದರೂ ಸಹ ಮಾತುಕತೆಗೆ ತಡೆಯೊಡ್ಡುತ್ತಿರುವ ಭಯೋತ್ಪಾದಕ ಗುಂಪುಗಳ ಮೇಲೆ ಪಾಕಿಸ್ತಾನ ನಿಗಾ ವಹಿಸಬೇಕು~ ಎಂದು ಅವರು ಸಲಹೆ ನೀಡಿದರು.

`ಪಾಕಿಸ್ತಾನದ ಗಡಿಯನ್ನು ಭಾರತ ವಿರೋಧಿ ಚಟುವಟಿಕೆಗಳಿಗಾಗಿ ಬಳಸಿಕೊಳ್ಳುವುದಿಲ್ಲ ಎಂದು ಪಾಕಿಸ್ತಾನ ಅಧಿಕಾರಿಗಳು ನಮಗೆ ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ ಮುಂಬೈ ದಾಳಿಯ ಹಿಂದಿನ ಸಂಚುಗಾರ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಬಹಿರಂಗವಾಗಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದಿದೆ~ ಎಂದು ಅವರು ತಿಳಿಸಿದರು.

ತೈಲ ವಿವಾದ: ಭಾರತದ ತೈಲ ಬೇಡಿಕೆಯನ್ನು ಇರಾನ್ ಮಾತ್ರ ಪೂರೈಸಬಲ್ಲದು ಎಂಬುದು ಅಮೆರಿಕ ಅರ್ಥಮಾಡಿಕೊಂಡಿದೆ. ಆದರೆ ಅಂತರರಾಷ್ಟ್ರೀಯ ಕಾರಣಗಳಿಂದಾಗಿ ಈ ಅವಲಂಬನೆಯ ಪ್ರಮಾಣ ಕಡಿಮೆಯಾಗಿದ್ದರೂ ಕೂಡ ನಮ್ಮ ಬೇಡಿಕೆಗಳನ್ನು ಪೂರೈಸಲು ಸೌದಿ ಅರೇಬಿಯಾವನ್ನು ಕೋರಿದ್ದು, ಅದು ನಮ್ಮ ಬೇಡಿಕೆಅರ್ಥ ಮಾಡಿಕೊಳ್ಳಬಹುದು ಎಂದರು.

ಸಿಂಗ್‌ಗೆ ಶ್ಲಾಘನೆ: ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಉತ್ತಮಪಡಿಸುವಲ್ಲಿ ತೆಗೆದುಕೊಳ್ಳಲಾದ ಕ್ರಮಗಳಿಗೆ ಹಿಲರಿ ಕ್ಲಿಂಟನ್ ಅವರು ಭಾರತ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕಿಸ್ತಾನ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರನ್ನು ಪ್ರಶಂಸಿಸಿದರು.

ಕೈರಿ ಪ್ರಸ್ತಾಪ: ಪೌರತ್ವ ಕುರಿತು ಸೂಕ್ತ ದಾಖಲೆಗಳಿಲ್ಲದೆ ತೀವ್ರ ಒತ್ತಡ ಅನುಸರಿಸುತ್ತಿರುವ ಭಾರತೀಯ ಮೂಲದ ಅಮೆರಿಕ ಯುವತಿ ಕೈರಿ ಶೆಫರ್ಡ್ ಕುರಿತೂ ತಾನು ಹಿಲರಿ ಜೊತೆ ಮಾತುಕತೆ ನಡೆಸಿರುವುದಾಗಿ ಕೃಷ್ಣ ಹೇಳಿದರು.
ಹೆಡ್ಲಿ ಚರ್ಚೆ: ಮಂಬೈ ದಾಳಿಯ  ಮುಖ್ಯ ಸೂತ್ರದಾರಿಗಳಾಗಿರುವ ಡೇವಿಡ್ ಹೆಡ್ಲಿ ಹಾಗೂ ಸಹಚರ ತಹಾವೂರ್ ರಾಣಾ ಅವರನ್ನು ದಾಳಿಯ ವಿಚಾರಣೆಗಾಗಿ ಭಾರತದ ಕಾನೂನಿನಂತೆ ತಮ್ಮ ವಶಕ್ಕೆ ಒಪ್ಪಿಸುವಂತೆಯೂ ಕೃಷ್ಣ ಪ್ರಸ್ತಾಪ ಮುಂದಿಟ್ಟರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.