ADVERTISEMENT

ಭಾರತ, ಪಾಕಿಸ್ತಾನಕ್ಕೆ ಎಸ್‌ಸಿಒ ಸದಸ್ಯತ್ವ

ದ್ವಿಪಕ್ಷೀಯ ಭಿನ್ನಾಭಿಪ್ರಾಯವು ಸಂಘಟನೆ ಮೇಲೆ ಪರಿಣಾಮ ಬೀರದು: ಚೀನಾ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 15 ಜೂನ್ 2017, 19:30 IST
Last Updated 15 ಜೂನ್ 2017, 19:30 IST
ವಿಜಯ್ ಗೋಖಲೆ ಮತ್ತು ಮಸೂದ್ ಖಾಲಿದ್ ಡ್ರಮ್ ಬಾರಿಸಿದರು. ಚೀನಾ ಸಹಾಯಕ ವಿದೇಶಾಂಗ ಸಚಿವ ಕಾಂಗ್ ಕ್ಸುವಾನ್ಯು ಮತ್ತು ಎಸ್‌ಸಿಒ ಪ್ರಧಾನ ಕಾರ್ಯದರ್ಶಿ ರಶೀದ್ ಅಲಿಮೊವ್ ಇದ್ದಾರೆ
ವಿಜಯ್ ಗೋಖಲೆ ಮತ್ತು ಮಸೂದ್ ಖಾಲಿದ್ ಡ್ರಮ್ ಬಾರಿಸಿದರು. ಚೀನಾ ಸಹಾಯಕ ವಿದೇಶಾಂಗ ಸಚಿವ ಕಾಂಗ್ ಕ್ಸುವಾನ್ಯು ಮತ್ತು ಎಸ್‌ಸಿಒ ಪ್ರಧಾನ ಕಾರ್ಯದರ್ಶಿ ರಶೀದ್ ಅಲಿಮೊವ್ ಇದ್ದಾರೆ   

ಬೀಜಿಂಗ್: ಶಾಂಘೈ ಸಹಕಾರ ಸಂಘಟನೆಗೆ (ಎಸ್‌ಸಿಒ) ಭಾರತ ಮತ್ತು ಪಾಕಿಸ್ತಾನವನ್ನು ಬರಮಾಡಿಕೊಳ್ಳುವ ಮೂಲಕ, ಈ ಎರಡೂ ರಾಷ್ಟ್ರಗಳ ವೈಮನಸ್ಸು ಸಂಸ್ಥೆಯ ಒಗ್ಗಟ್ಟಿನ ಮೇಲೆ ಯಾವುದೇ ಪರಿಣಾಮ ಬೀರದು  ಎಂದು  ಚೀನಾ ಸ್ಪಷ್ಟಪಡಿಸಿದೆ.

‘ಭಾರತ ಮತ್ತು ಪಾಕಿಸ್ತಾನವು ಈ ಸಂಘದ ಸದಸ್ಯರಾಗಿರುವುದು ಸಂಸ್ಥಾಪಕ ಸದಸ್ಯರಾದ ನಮಗೆ ಖುಷಿ ತಂದಿದೆ’ ಎಂದು ಚೀನಾದ ಸಹಾಯಕ ವಿದೇಶಾಂಗ ಸಚಿವ ಕಾಂಗ್ ಕ್ಸುವಾನ್ಯು ಅವರು ಎಸ್‌ಸಿಒ ಮುಖ್ಯ ಕಚೇರಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ಬಾವುಟಗಳನ್ನು ಹಾರಿಸುವ ಮೂಲಕ ಈ ರಾಷ್ಟ್ರಗಳ ಸದಸ್ಯತ್ವವನ್ನು ಅಧಿಕೃತವಾಗಿ ಘೋಷಿಸಲಾಯಿತು. ಚೀನಾಕ್ಕೆ ಭಾರತದ ರಾಯಭಾರಿಯಾಗಿರುವ ವಿಜಯ್ ಗೋಖಲೆ ಮತ್ತು ಅವರ ಪಾಕಿಸ್ತಾನ ಸಹವರ್ತಿ ಮಸೂದ್ ಖಾಲಿದ್ ಜಂಟಿಯಾಗಿ ಡ್ರಮ್ ಬಾರಿಸುವ ಮೂಲಕ, ಸಂಸ್ಥೆಯಲ್ಲಿ ತಾವು ಸದಸ್ಯತ್ವ ಪಡೆದಿರುವುದನ್ನು ಸಾರಿದರು.

ADVERTISEMENT

ಜೂನ್ 8–9ರಂದು ಖಜಕಿಸ್ತಾನದ ರಾಜಧಾನಿ ಅಸ್ತಾನಾದಲ್ಲಿ ನಡೆದ  ಶೃಂಗಸಭೆಯಲ್ಲಿ ಉಭಯ ದೇಶಗಳೂ ಎಸ್‌ಸಿಒ ಸದಸ್ಯತ್ವಕ್ಕೆ ಔಪಚಾರಿಕ ಒಪ್ಪಿಗೆ ಸೂಚಿಸಿದ್ದವು.

ಚೀನಾದ ಸರ್ಕಾರಿ ಸುದ್ದಿ ಮಾಧ್ಯಮಕ್ಕೆ ಸಂದರ್ಶನ ನೀಡಿದ ಕಾಂಗ್, ‘ದ್ವಿಪಕ್ಷೀಯ ಭಿನ್ನಾಭಿಪ್ರಾಯಗಳನ್ನು ಸಂಸ್ಥೆಯ ವೇದಿಕೆಗೆ ತರುವಂತಿಲ್ಲ ಎಂಬ ನಿಯಮ ಎಸ್‌ಸಿಒ ನಿಯಮಾವಳಿಯಲ್ಲೇ ಇದೆ. ಈ ನಿಯಮಕ್ಕೆ ಎರಡೂ ರಾಷ್ಟ್ರಗಳು ಬದ್ಧವಾಗಿರುತ್ತವೆ ಎಂದು ನಾವು ನಂಬಿದ್ದೇವೆ’ ಎಂದರು.

‘ನಮ್ಮೊಳಗಿನ ಭಿನ್ನಾಭಿಪ್ರಾಯವನ್ನು ಮೀರಿಸುವಂಥ ವಿಚಾರಗಳು ಸಂಸ್ಥೆಯ ಮುಂದಿವೆ. ಆದ್ದರಿಂದ ಭಿನ್ನಾಭಿಪ್ರಾಯವನ್ನು ವೈಭವೀಕರಿಸಬಾರದು. ಈಗ ನಾವೆಲ್ಲ ದೊಡ್ಡ ಕುಟುಂಬವೊಂದರ ಸದಸ್ಯರು’ ಎಂದು ಅವರು ಹೇಳಿದರು.

‘ಭಾರತ, ಪಾಕಿಸ್ತಾನ, ಚೀನಾ ಅಭಿವೃದ್ಧಿಯ ಸಮಾನ ಹಂತದಲ್ಲಿವೆ. ನಾವೆಲ್ಲ ಒಂದೇ ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಇವುಗಳನ್ನು ಮೀರಲು ಸಂಸ್ಥೆಯ ಮೂಲಕ ಶ್ರಮಿಸುತ್ತೇವೆ’ ಎಂದರು.

‘ಭಾರತ ಮತ್ತು ಪಾಕಿಸ್ತಾನದ ಬಾಂಧವ್ಯ ವೃದ್ಧಿಗೆ ಸಾಕಷ್ಟು ದ್ವಿಪಕ್ಷೀಯ ಮಾರ್ಗಗಳಿವೆ. ಎಸ್‌ಸಿಒ ಮತ್ತೊಂದು ಅವಕಾಶ ಎಂದು ನಾವು ಪರಿಗಣಿಸುತ್ತೇವೆ’ ಎಂದು ವಿಜಯ್ ಗೋಖಲೆ ತಮ್ಮ ಸಂದರ್ಶನದಲ್ಲಿ ಹೇಳಿದರು.

ಭಾರತ, ಪಾಕಿಸ್ತಾನದ ನಡುವಿನ ವಿವಾದಗಳ ಮಧ್ಯಸ್ಥಿಕೆಗೂ ಎಸ್‌ಸಿಒ ಸಹಕಾರಿಯಾಗಬಲ್ಲದು ಎಂದು ಖಾಲಿದ್ ವಿಶ್ವಾಸ ವ್ಯಕ್ತಪಡಿಸಿದರು.
***
ಸದಸ್ಯ ರಾಷ್ಟ್ರಗಳು

ಚೀನಾ, ರಷ್ಯಾ, ಖಜಕಿಸ್ತಾನ, ಕಿರ್ಗಿಸ್ತಾನ, ತಜಕಿಸ್ತಾನ, ಉಜ್ಬೇಕಿಸ್ತಾನ, ಭಾರತ, ಪಾಕಿಸ್ತಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.