ADVERTISEMENT

ಭಾರತ- ಪಾಕ್‌ಗೆ ಯುದ್ಧ ಭೀತಿ ಬೇಡ: ಗಿಲಾನಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2011, 19:00 IST
Last Updated 1 ಏಪ್ರಿಲ್ 2011, 19:00 IST
ಭಾರತ- ಪಾಕ್‌ಗೆ ಯುದ್ಧ ಭೀತಿ ಬೇಡ: ಗಿಲಾನಿ
ಭಾರತ- ಪಾಕ್‌ಗೆ ಯುದ್ಧ ಭೀತಿ ಬೇಡ: ಗಿಲಾನಿ   

ಇಸ್ಲಾಮಾಬಾದ್ (ಪಿಟಿಐ): ‘ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಗಳು ಬಗೆಹರಿಯಬೇಕೆಂದರೆ ಎರಡೂ ದೇಶಗಳು ಮೊದಲು ಯುದ್ಧ ಭೀತಿಯಿಂದ ಹೊರಬರಬೇಕು; ಇಲ್ಲದಿದ್ದರೆ ಯಾವುದೋ ಮೂರನೇ ಶಕ್ತಿ ಬಂದು ಅವುಗಳ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ’ ಎಂದು ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ ಗಿಲಾನಿ ಶುಕ್ರವಾರ ಹೇಳಿದ್ದಾರೆ.

‘ಎರಡೂ ದೇಶಗಳ ಬಡವರ ಬಗ್ಗೆ ನಾವು ಗಮನ ಕೇಂದ್ರೀಕರಿಸಬೇಕಾಗಿದೆ. ಯುದ್ಧ ಭೀತಿ ಅಂತ್ಯಗೊಂಡಾಗಲಷ್ಟೇ ಇದು ಕಾರ್ಯರೂಪಕ್ಕೆ ಬರಲು ಸಾಧ್ಯ’ ಎಂದು ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ವೀಕ್ಷಿಸಲು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ನಡೆಸಿದ ಮಾತುಕತೆಯ ಬಗ್ಗೆ ಸಂಸತ್ತಿನ ಮೇಲ್ಮನೆಗೆ ವಿವರ ನೀಡಿದ ಸಂದರ್ಭದಲ್ಲಿ ಅವರು ಅಭಿಪ್ರಾಯಪಟ್ಟರು.

‘ನಮ್ಮ ಸಮಸ್ಯೆಗಳನ್ನು ನಾವಿಬ್ಬರೂ ಜೊತೆಗೂಡಿ ಬಗೆಹರಿಸಿಕೊಳ್ಳಬೇಕಾಗಿದೆ. ನಮ್ಮ ದೇಶಗಳ ಬಡವರ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡಬೇಕೆಂಬ ಬಗ್ಗೆ ನಮಗಿಬ್ಬರಿಗೂ ಸಹಮತ ಇದೆ ಎಂದರು.

ಎಲ್ಲ ವಿಷಯದ ಬಗ್ಗೆಯೂ ಚರ್ಚಿಸಲು ಭಾರತ ಸಿದ್ಧವಿದೆ ಎಂದು ಸಿಂಗ್ ತಮಗೆ ತಿಳಿಸಿದರು ಎಂದ ಅವರು, ಮೊಹಾಲಿಯಲ್ಲಿ ತಮಗೆ ನೀಡಿದ ಆದರಾತಿಥ್ಯವನ್ನು ಸ್ಮರಿಸಿದರು.

ಹಿಂದೆ ಯುದ್ಧ ನಡೆಯುತ್ತದೆ ಎಂಬ ಭಾವನೆ ಭಾರತದ ಜನರಲ್ಲಿತ್ತು. ಆದರೆ ಈ ಬಾರಿ ಅಂತಹ ವಾತಾವರಣ ಕಾಣಲಿಲ್ಲ. ಕ್ರೀಡಾಂಗಣದಲ್ಲಿ ನಾವು ಕೈಬೀಸಿದಾಗ ಇಡೀ ಜನಸಮೂಹ ಎದ್ದುನಿಂತಿತು. ವಾಪಸ್ ಬರುವಾಗ ಎರಡೂ ಬದಿಯಲ್ಲಿದ್ದ ಜನ ಶುಭ ಕೋರಿದರು ಎಂದರು.

ಭಾರತ ಕ್ರಿಕೆಟ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿದ್ದನ್ನು ‘ಅದು ಕ್ರಿಕೆಟ್‌ಗೆ ದೊರೆತ ಜಯ’ ಎಂದು ಗಿಲಾನಿ ಬಣ್ಣಿಸಿದರು. ಕ್ರೀಡಾ ಮನೋಭಾವದಿಂದ ನಾವು ಇದನ್ನು ಸ್ವೀಕರಿಸಬೇಕು. ನಮ್ಮ ಯುವಜನ ಮತ್ತು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.