ADVERTISEMENT

ಭೂಕಂಪ ಮಾಹಿತಿಗೆ ಕೃತಕ ಉಪಗ್ರಹ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 18:20 IST
Last Updated 20 ಫೆಬ್ರುವರಿ 2011, 18:20 IST

ಲಂಡನ್ (ಪಿಟಿಐ): ಕೃತಕ ಉಪಗ್ರಹ ಬಳಸಿ ಭೀಕರ ಭೂಕಂಪ ಸಂಭವಿಸುವುದನ್ನು ಮೊದಲೇ ನಿಖರವಾಗಿ ಪತ್ತೆ ಮಾಡಬಹುದೇ? ಇದು ಸಾಧ್ಯ ಎಂಬುದನ್ನು ಸಾಬೀತುಪಡಿಸಲು ಬ್ರಿಟಿಷ್ ಮತ್ತು ರಷ್ಯ ವಿಜ್ಞಾನಿಗಳು ಯೋಜನೆ ಸಿದ್ಧಪಡಿಸಿದ್ದಾರೆ.

ರಷ್ಯ ಮತ್ತು ಬ್ರಿಟಿಷ್ ವಿಜ್ಞಾನಿಗಳು ಈ ಹೊಸ ಯೊಜನೆಯನ್ನು ಪೂರ್ಣಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರಿಂದ ಭೂಕಂಪ ಯಾವಾಗ, ಎಲ್ಲಿ  ಸಂಭವಿಸುತ್ತದೆ ಎಂದು ನಿಖರವಾಗಿ ಪತ್ತೆಹಚ್ಚಲು ಸಾಧ್ಯ ಎಂದು ಅವರು ಹೇಳಿಕೊಂಡಿದ್ದಾರೆ.

ಭೀಕರ ಭೂಕಂಪಗಳಿಂದ ಅಮೂಲ್ಯ ಜೀವಹಾನಿ, ಅಪಾರ ಆಸ್ತಿಪಾಸ್ತಿ ನಾಶವಾಗುವುದನ್ನು  ತಡೆಯಬಹುದು.

ಎರಡು ಕೃತಕ ಉಪಗ್ರಹಗಳನ್ನು ಹೊಂದಿದ ‘ಟ್ವಿನ್ ಸ್ಯಾಟ್’ ಯೋಜನೆ ಇದು. ಒಂದು ಟಿ.ವಿ.ಯಷ್ಟು ದೊಡ್ಡದಿದ್ದರೆ, ಇನ್ನೊಂದು ಶೂ ಪ್ಯಾಕ್‌ನಷ್ಟು ಚಿಕ್ಕದಿದೆ. ಇವೆರಡೂ ಭೂಮಿಯ ಸುತ್ತ ಕೆಲವು ನೂರು ಮೈಲುಗಳ ಅಂತರದಲ್ಲಿ ಪ್ರದಕ್ಷಿಣೆ ಹಾಕಲಿವೆ ಎಂದು ‘ದಿ ಇಂಡಿಪೆಂಡೆಂಟ್’ ವರದಿ ಮಾಡಿದೆ.

ಅವಳಿ ಕೃತಕ ಉಪಗ್ರಹ ಭೂಕಂಪ ಮತ್ತು ಜ್ವಾಲಾಮುಖಿ ಸೂಕ್ಷ್ಮ ಪ್ರದೇಶಗಳಾದ ಐಸ್‌ಲ್ಯಾಂಡ್, ರಷ್ಯದ ಕಮ್ಚಟಕಾ ಅರೆದ್ವೀಪ ಪ್ರದೇಶಗಳ ಮೇಲೆ ನಿಗಾ ಇರಿಸುತ್ತದೆ. ಭೂಕಂಪಕ್ಕೆ ಮುನ್ನ ನಿರ್ಮಾಣವಾಗುವ ಒತ್ತಡ, ವಿದ್ಯುತ್‌ಕಾಂತೀಯ ಸಂಕೇತಗಳನ್ನು ಗುರುತಿಸಿ ಮುನ್ನೆಚ್ಚರಿಕೆ ನೀಡುತ್ತವೆ ಎಂದು ಲಂಡನ್‌ನ  ವಿಶ್ವವಿದ್ಯಾಲಯ ಪ್ರಧ್ಯಾಪಕ ಪ್ರೊ. ಅಲೆನ್ ಸ್ಮಿತ್ ಹಾಗೂ ಮಾಸ್ಕೊದ ‘ಇನ್‌ಸ್ಟಿಟ್ಯೂಟ್ ಆಫ್ ಫಿಸಿಕ್ಸ್ ಆನ್ ಅರ್ಥ್’ನ ಪಾಲುದಾರ ಪ್ರೊ.ವಿಟಾಲಿ ಚಿಮ್‌ರೇವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.