ADVERTISEMENT

ಭೂತಾನ್ ದೊರೆ ಅದ್ದೂರಿ ವಿವಾಹ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 19:30 IST
Last Updated 13 ಅಕ್ಟೋಬರ್ 2011, 19:30 IST

ಪುನಖಾ, (ಪಿಟಿಐ): ಭೂತಾನ್ ದೊರೆ ಜಿಗ್ಮೆ  ಕೇಸರ್ ನಮ್‌ಗೇಲ್ ವಾಂಗ್‌ಚುಕ್ ಬಾಲ್ಯ ಗೆಳತಿ ಜೆತ್ಸುನ್ ಪೆಮಾ ಅವರನ್ನು ಗುರುವಾರ ಅದ್ದೂರಿಯಾಗಿ ನಡೆದ ಸಮಾರಂಭದಲ್ಲಿ ವಿವಾಹವಾದರು.

ರಾಜಧಾನಿ ಥಿಂಪುದಿಂದ 71 ಕಿಮೀ ದೂರದಲ್ಲಿರುವ ಕಣ್ಮನ ಸೆಳೆಯುವ ಐತಿಹಾಸಿಕ ನಗರ ಪುನಖಾದಲ್ಲಿ ಬೌದ್ಧ ಸಂಪ್ರದಾಯದಂತೆ ಈ ಮದುವೆ ನೆರವೇರಿತು.

ಕೆಂಪು ಉಡುಪು ಧರಿಸಿದ್ದ ಬೌದ್ಧ ಸನ್ಯಾಸಿಗಳು ಲಯಬದ್ಧವಾಗಿ ಸ್ತೋತ್ರ ಪಠಿಸಿದರೆ, ವಾದ್ಯಗಾರರು ಡ್ರಮ್ ಬಾರಿಸಿದರು.

ADVERTISEMENT

31 ವರ್ಷದ ಉತ್ಸಾಹಿ ತರುಣ ದೊರೆ ವಾಂಗ್‌ಚುಕ್, 21 ವರ್ಷದ ತರುಣಿ ಪೆಮಾ ತಲೆಗೆ ಕಿರೀಟ ತೊಡಿಸಿದರು. ಭೂತಾನ್ ಬೌದ್ಧ ಸನ್ಯಾಸಿಗಳ ಮುಖ್ಯಸ್ಥ ಜೆ. ಕೆನ್‌ಪೊ ನೇತೃತ್ವದಲ್ಲಿ ವಿವಾಹ ವಿಧಿವಿಧಾನಗಳು ನೆರವೇರಿದವು. 100 ಬೌದ್ಧ ಸನ್ಯಾಸಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪೆಮಾ ಹಳದಿ ಬಣ್ಣದ ಪೋಷಾಕು ಧರಿಸಿದ್ದರು ಮತ್ತು ಸಂಪ್ರದಾಯದಂತೆ ಸ್ಕರ್ಟ್ ತೊಟ್ಟಿದ್ದರು. ಹಲವು ಧಾರ್ಮಿಕ ವಿಧಿವಿಧಾನಗಳ ಬಳಿಕ ಪೆಮಾ ಅವರನ್ನು `ಭೂತಾನ್ ರಾಣಿ~ ಎಂದು ಅಧಿಕೃತವಾಗಿ ಘೋಷಿಸಲಾಯಿತು.
ಭೂತಾನದಲ್ಲಿಯ ಭಾರತದ ರಾಯಭಾರಿ ಪವನ್ ಕೆ. ವರ್ಮಾ, ಪಶ್ಚಿಮ ಬಂಗಾಳ ರಾಜ್ಯಪಾಲ ಎಂ.ಕೆ. ನಾರಾಯಣನ್, ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ರಾಜಕುಟುಂಬದವರು ಸೇರಿ 300 ಕ್ಕೂ ಹೆಚ್ಚು ಅತಿಥಿ ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾದರು.

ಪ್ರಧಾನಿ ಜಿಗ್ಮಿ ವೈ. ಥಿನ್ಲೆ ಮತ್ತು ಭೂತಾನ್ ರಾಜಕುಟುಂಬದ ಪೊಲೀಸ್ ಮುಖ್ಯಸ್ಥರೊಂದಿಗೆ ದೊರೆ ಅರಮನೆಯಿಂದ ಹೊರ ಬಂದರು.

ದೊರೆ ವಾಂಗ್‌ಚುಕ್ ಹೊಳೆಯುತ್ತಿದ್ದ ಕಿರೀಟವನ್ನು ಪೆಮಾ ತಲೆ ಮೇಲಿಟ್ಟ ಬಳಿಕ ಸಂಪ್ರದಾಯದಂತೆ ಅವರು ದೊರೆ ಕಾಲಿಗೆ ಮೂರು ಬಾರಿ ನಮಸ್ಕರಿಸಿದರು.

ರಾಷ್ಟ್ರದ 7 ಲಕ್ಷಕ್ಕೂ ಹೆಚ್ಚು ಜನರು ಟಿವಿ ಮೂಲಕ ವಿವಾಹ ಸಮಾರಂಭವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಿದರು.
ಪೆಮಾ ಪ್ರೌಢಶಾಲಾ ಶಿಕ್ಷಣವನ್ನು ಭಾರತದ ಹಿಮಾಚಲ ಪ್ರದೇಶದಲ್ಲಿ ಮುಗಿಸಿದ್ದಾರೆ. ಸಮಾರಂಭಕ್ಕೆ ಹಾಜರಾದ ಅತಿಥಿಗಳು ಮತ್ತು ವಿವಿಧ ದೇಶಗಳ ಪ್ರತಿನಿಧಿಗಳಿಗೆ ರಾಷ್ಟ್ರದ ಸಾಂಪ್ರದಾಯಿಕ ಔತಣ ಸಿದ್ಧಪಡಿಸಲಾಗಿತ್ತು. ಇದರಲ್ಲಿ ಭಾರತದಲ್ಲಿ ಜನಪ್ರಿಯವಾಗಿರುವ ರೋಟಿಯೂ ಸೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.