ADVERTISEMENT

ಮಂಗಳನ ಅಂಗಳದಲ್ಲಿ ರಂಧ್ರ

ಹೊಸ ತಂತ್ರಜ್ಞಾನದಿಂದ ಮಣ್ಣು ಅಗೆದ ಕ್ಯೂರಿಯಾಸಿಟಿ ರೋವರ್

ಪಿಟಿಐ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST
ಕ್ಯೂರಿಯಾಸಿಟಿ ರೋವರ್
ಕ್ಯೂರಿಯಾಸಿಟಿ ರೋವರ್   

ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಮಂಗಳ ಗ್ರಹಕ್ಕೆ ಕಳುಹಿಸಿರುವ ಕ್ಯೂರಿಯಾಸಿಟಿ ರೋವರ್, ಹೊಸ ಕೊರೆಯುವ ತಂತ್ರಜ್ಞಾನ ಬಳಸಿ ಇದೇ ಮೊದಲ ಬಾರಿಗೆ ಮಣ್ಣು ಅಗೆದಿದೆ.

‘2012ರಲ್ಲಿ ಮಂಗಳನ ಅಂಗಳದಲ್ಲಿ ಇಳಿದಿರುವ ಈ ರೋವರ್, ಇದುವರೆಗೆ 15 ಸಲ ವಿವಿಧೆಡೆ ರಂಧ್ರ ಕೊರೆದು, ಮಣ್ಣು, ಬಂಡೆ, ಕಲ್ಲುಗಳ ಮಾದರಿ ಸಂಗ್ರಹಿಸಿತ್ತು. ಆದರೆ, 2016ರ ಡಿಸೆಂಬರ್‌ನಲ್ಲಿ ಕೊರೆಯುವ ಸಾಧನದ ಮುಖ್ಯ ಭಾಗವೊಂದು ಕೆಟ್ಟಿತ್ತು. ಆಗಿನಿಂದ ಈ ಸಾಧನ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ’ ಎಂದು ನಾಸಾ ತಿಳಿಸಿದೆ.

‘ಹೊಸ ಕೊರೆಯುವ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬುದರ ಸರಣಿ ಪರೀಕ್ಷೆಯಲ್ಲಿ ಇದು ಮೊದಲ ಪರೀಕ್ಷೆಯಷ್ಟೇ. ನಾವು ನೀಡಿದ್ದ ‘ಲೇಕ್ ಒರ್ಕಾಡೀ’ ಎಂಬ ಗುರಿ ಆಧರಿಸಿ, ಈ ರೋವರ್ ಒಂದು ಸೆಂಟಿ ಮೀಟರ್ ರಂಧ್ರ ಕೊರೆದಿದೆ. ಇದರಿಂದ ದೊರೆಯುವ ಮಾದರಿಯು ವೈಜ್ಞಾನಿಕ ಅಧ್ಯಯನಕ್ಕೆ ಸಾಕಾಗುವುದಿಲ್ಲ. ಆದರೆ ಹೊಸ ವಿಧಾನದ ಕಾರ್ಯಕ್ಷಮತೆ ಅಳೆಯುವುದಕ್ಕೆ ಇಷ್ಟು ಸಾಕು’ ಎಂದು ಅದು ತಿಳಿಸಿದೆ.

ADVERTISEMENT

‘ಈ ತಂತ್ರಜ್ಞಾನ ಬಳಸಿ ಭೂಮಿ ಮೇಲೆ ನೆಲ ಕೊರೆದಷ್ಟೇ ಸುಲಭವಾಗಿ ಮಂಗಳನಲ್ಲೂ ಕೊರೆಯಬಹುದು. ಮನುಷ್ಯ ತನಗೆ ಬೇಕಾದಂತೆ ಕೊರೆಯುತ್ತಾನೆ. ಆದರೆ ರೋವರ್‌ ಅನ್ನು ಈ ಕಾರ್ಯಕ್ಕೆ ಸಜ್ಜುಗೊಳಿಸುವುದು ಸವಾಲಿನ ಕೆಲಸ. ಹಾಗೆ ನೋಡಿದರೆ ರಂಧ್ರ ಕೊರೆಯಲು, ಮಣ್ಣು ಅಗೆಯಲು ಈ ರೋವರ್‌ ಅನ್ನು ವಿನ್ಯಾಸ ಮಾಡಿರಲಿಲ್ಲ’ ಎಂದು ನಾಸಾದ ಜೆಟ್ ಪ್ರೊಪಲ್ಷನ್ ಪ್ರಯೋಗಾಲಯದ ಯೋಜನಾ ಉಪ ವ್ಯವಸ್ಥಾಪಕ ಸ್ಟೀವನ್ ಲೀ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.