ADVERTISEMENT

ಮತ್ತೊಂದು ದಾಳಿ ನಡೆದರೆ ಭಾರತದ ಪ್ರತೀಕಾರ: ಅಮೆರಿಕ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 15:45 IST
Last Updated 1 ಫೆಬ್ರುವರಿ 2011, 15:45 IST

ವಾಷಿಂಗ್ಟನ್ (ಪಿಟಿಐ): ಮುಂಬೈ ದಾಳಿ ಮಾದರಿಯಲ್ಲಿ ಭಾರತದ ಮೇಲೆ ಮತ್ತೊಮ್ಮೆ ಉಗ್ರರ ದಾಳಿ ನಡೆದರೆ ಪಾಕಿಸ್ತಾನವು ಭಾರತದಿಂದ ತೀವ್ರ ಪ್ರತೀಕಾರ ಎದುರಿಸಬೇಕಾಗುತ್ತದೆ ಎಂದು ಒಬಾಮ ಆಡಳಿತದ ಉನ್ನತ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ.

‘ಮತ್ತೊಂದು ದಾಳಿ ನಡೆದರೆ, ಮುಂಬೈ ದಾಳಿ ಘಟನೆಯಷ್ಟೇ ಸಂಖ್ಯೆಯ ನಾಗರಿಕರು ಸಾವಿಗೀಡಾದರೆ ಮತ್ತು ಇದರಲ್ಲಿ ಪಾಕಿಸ್ತಾನ ಭಾಗಿಯಾಗಿರುವ ಆರೋಪವೇನಾದರೂ ಕೇಳಿ ಬಂದರೆ ಪ್ರತೀಕಾರ ಕ್ರಮಕ್ಕೆ ಸ್ಥಳೀಯವಾಗಿ ತೀವ್ರ ಒತ್ತಡ ಇರುತ್ತದೆ’ ಎಂದು ದಕ್ಷಿಣ ಏಷ್ಯಾಕ್ಕೆ ವಿದೇಶಾಂಗ ಇಲಾಖೆಯ ಸಹಾಯಕ ಕಾರ್ಯದರ್ಶಿ ಆಗಿರುವ ರಾಬರ್ಟ್ ಬ್ಲೇಕ್ ಹೇಳಿದ್ದಾರೆ.

ನ್ಯೂಯಾರ್ಕ್‌ನಲ್ಲಿ ರೇಡಿಯೊ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಅವರು, ಪಾಕಿಸ್ತಾನದ ಎಲ್‌ಇಟಿ ನಡೆಸಿದ ಮುಂಬೈ ದಾಳಿಯು 166 ಜನರನ್ನು ಬಲಿ ತೆಗೆದುಕೊಂಡ ಘಟನೆ ಬಳಿಕ ಭಾರತ ತೋರಿದ ಸಂಯಮವನ್ನು ಶ್ಲಾಘಿಸಿದ್ದಾರೆ.

‘ಆ ಸಮಯದಲ್ಲಿ ಪ್ರತೀಕಾರ ತೋರದೆ ಭಾರತೀಯರು ಅಪಾರ ಸಂಯಮ ಮೆರೆದರು’ ಎಂದು ಅವರು ಹೇಳಿದ್ದಾರೆ.

 ಪಾಕಿಸ್ತಾನದವರು ತಮ್ಮ ಭಾರತದ ಗಡಿಯಿಂದ ಆಫ್ಘನ್ ಗಡಿವರೆಗೆ, ಆಫ್ಘಾನಿಸ್ತಾನದಲ್ಲಿ ನೆಲೆಸಿರುವ ಅಮೆರಿಕ ಪಡೆಗಳ ಮೇಲೆ ಅನೇಕ ಗುಂಪುಗಳು ದಾಳಿ ನಡೆಸುತ್ತಿರುವ ಸ್ಥಳದಲ್ಲೇ ಸುಮಾರು 1,40,000 ಪಡೆಗಳನ್ನು ಪುನರ್ ನಿಯೋಜಿಸಿದ್ದಾರೆ ಎಂದೂ ತಿಳಿಸಿದ್ದಾರೆ.

‘ಮತ್ತೊಂದು ದಾಳಿ ನಡೆಯುವುದನ್ನು ತಪ್ಪಿಸಲು ನಾವು ಭಯೋತ್ಪಾದನಾ ನಿಗ್ರಹದಲ್ಲಿ ನಮ್ಮ ಸಹಕಾರವನ್ನು  ವೃದ್ಧಿಸಿಕೊಳ್ಳಲು ಸಾಕಷ್ಟು ಕ್ರಮ ಕೈಗೊಂಡಿದ್ದೇವೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.