ADVERTISEMENT

ಮನ ಸೆಳೆದ ಸೌರ ವಿಮಾನ

​ಪ್ರಜಾವಾಣಿ ವಾರ್ತೆ
Published 26 ಜೂನ್ 2011, 19:30 IST
Last Updated 26 ಜೂನ್ 2011, 19:30 IST
ಮನ ಸೆಳೆದ ಸೌರ ವಿಮಾನ
ಮನ ಸೆಳೆದ ಸೌರ ವಿಮಾನ   

ಪ್ಯಾರಿಸ್ (ಪಿಟಿಐ): ಇಂಧನ ಕೊರತೆ ನೀಗಿಸಲು ವಿಶ್ವದಾದ್ಯಂತ ಶತ ಪ್ರಯತ್ನಗಳು ನಡೆಯುತ್ತಿರುವ ಬೆನ್ನಲ್ಲೇ ಸೌರ ವಿಮಾನಗಳು ಪ್ರಾಯೋಗಿಕ ಹಾರಾಟ ನಡೆಸಿ ಸೈ ಎನ್ನಿಸಿಕೊಂಡಿವೆ.

ಭಾನುವಾರ ಇಲ್ಲಿ ನಡೆದ ಅಂತರ ರಾಷ್ಟ್ರೀಯ ವೈಮಾನಿಕ ಪ್ರದರ್ಶನದಲ್ಲಿ ಹಾರಾಡಿದ, ಸ್ವಿಟ್ಜರ್ಲೆಂಡ್‌ನ ಸೌರ ವಿದ್ಯುತ್ ಚಾಲಿತ ವಿಮಾನಗಳು ನೋಡುಗರನ್ನು ನಿಬ್ಬೆರಗಾಗಿಸಿದವು. ಸಾಮಾನ್ಯವಾಗಿ ಯದ್ಧ ವಿಮಾನಗಳು ಹಾಗೂ ವಾಣಿಜ್ಯ ಉದ್ದೇಶದ ವಿಮಾನಗಳೇ ಪ್ರದರ್ಶನಗೊಳ್ಳುತ್ತಿದ್ದ ಇಂತಹ ಪ್ರದರ್ಶನಗಳಲ್ಲಿ ಈ ಬಾರಿ ಕಾಣಿಸಿಕೊಂಡ ಸೌರ ವಿಮಾನಗಳು ಭವಿಷ್ಯದಲ್ಲಿ ವೈಮಾನಿಕ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳಾಗುವ ಸುಳಿವು ನೀಡಿದವು.

ಏರ್‌ಬಸ್ ಎ340 ಹೆಸರಿನ ಈ ವಿಮಾನಗಳು ಯಾವುದೇ ಇಂಧನದ ಸಹಾಯವಿಲ್ಲದೆ ಗಂಟೆಗೆ 70 ಕಿ.ಮೀ ಸಾಗಬಲ್ಲವು.  ಕೇವಲ ಸೂರ್ಯನ ಬೆಳಕನ್ನೇ ಉಪಯೋಗಿಸಿಕೊಂಡು ಹಗಲು ರಾತ್ರಿ ಹಾರಾಡುವ ಸಾಮರ್ಥ್ಯವನ್ನು ಇವು ಹೊಂದಿವೆ. 

ಸೂರ್ಯನ ಬೆಳಕನ್ನು ಶಕ್ತಿಯನ್ನಾಗಿ ಪರಿವರ್ತಿಸಿ ಸಂಗ್ರಹಿಸಿಕೊಳ್ಳುವ ಈ ವಿಮಾನದ ಬ್ಯಾಟರಿಗಳು ಮುಂದಿನ ಸೂರ್ಯೋದಯದವರೆಗೂ ವಿಮಾನ ಹಾರಾಟ ನಡೆಸಲು ಅನುವಾಗುತ್ತವೆ. ಈ ಪ್ರಕ್ರಿಯೆಯ ಮೂಲಕ ಸೌರ ವಿಮಾನವು ಒಂದೇ ದಿನದಲ್ಲಿ ಇಡೀ ಪ್ರಪಂಚವನ್ನೇ ಸುತ್ತು ಹಾಕಬಲ್ಲದು ಎಂದು ಸೌರ ವಿಮಾನ ತಯಾರಿಕಾ ಯೋಜನೆಯ ಮುಖ್ಯಸ್ಥ ಬರ್ಟ್ಯಾಂಡ್ ಪಿಕಾರ್ಡ್ ತಿಳಿಸಿದ್ದಾರೆ.

ಸೌರ ವಿಮಾನಗಳು ಅಧಿಕೃತ ಹಾರಾಟ ನಡೆಸಲು ವರ್ಷಗಳೇ ತಗುಲಬಹುದು, ಆದರೆ ಭವಿಷ್ಯದಲ್ಲಿ ಒಂದಲ್ಲ ಒಂದು ದಿನ ಈ ಮಾದರಿಯ ವಿಮಾನಗಳೇ ಕಾಯಂ ಆಗುವುದು ಖಚಿತ ಎಂದು ಯೋಜನೆಯ ಕಾರ್ಯನಿರ್ವಾಹಕ ಆ್ಯಂಡ್ರೆ ಬೋರ್ಚ್‌ಬರ್ಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.