ADVERTISEMENT

ಮಲೇರಿಯಾ: ರಹಸ್ಯ ಬಯಲು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ಮೆಲ್ಬರ್ನ್ (ಪಿಟಿಐ): ಮಲೇರಿಯಾ ತಂದೊಡ್ಡುವ ಪರಾವಲಂಬಿ ಸೂಕ್ಷ್ಮಾಣುಜೀವಿಗಳು ಲೈಂಗಿಕ ಸಂತಾನೋತ್ಪತ್ತಿಗೆ ಮುನ್ನ ಬಾಳೆಹಣ್ಣಿನ ಅಥವಾ ಅರ್ಧ ಚಂದ್ರಾಕೃತಿಯ ಆಕಾರಕ್ಕೆ ಪರಿವರ್ತನೆ ಹೊಂದುವ ಬಗೆಯನ್ನು ಪತ್ತೆಹಚ್ಚಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ.

ಹೀಗಾಗಿ, ಜಗತ್ತಿನಲ್ಲಿ ಪ್ರತಿವರ್ಷ 6 ಲಕ್ಷ ಜನರ ಸಾವಿಗೆ ಕಾರಣವಾಗುವ ಈ ಅಪಾಯಕಾರಿ ಸೂಕ್ಷ್ಮಾಣುಜೀವಿಗಳ ನಿರ್ಮೂಲನೆಗೆ ಪರಿಣಾಮಕಾರಿ ಲಸಿಕೆಗಳನ್ನು ಕಂಡುಹಿಡಿಯಲು ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಮಲೇರಿಯಾ ಸೂಕ್ಷ್ಮಾಣುಜೀವಿಯಾದ ಪ್ಲ್ಯಾಸ್ಮೋಡಿಯಂ ಫಾಲ್ಸಿ ಪ್ಯಾರಂ  ಆಕಾರ ಪರಿವರ್ತನೆ 130 ವರ್ಷಗಳಿಂದ ಮಾನವ ಜಗತ್ತನ್ನು ಸವಾಲಾಗಿ ಕಾಡುತ್ತಿತ್ತು. ಈ ಸಂಬಂಧದ ಸೂಕ್ತ ವಿವರ ಗೊತ್ತಿರಲಿಲ್ಲವಾದ್ದರಿಂದ ಪರಿಣಾಮಕಾರಿ ಔಷಧಿಯನ್ನೂ ಅಭಿವೃದ್ಧಿಪಡಿಸಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ತಮ್ಮ ಸಂಶೋಧನೆ ಆಕಾರ ಪರಿವರ್ತನೆಯ ವಿವರಗಳನ್ನು ಸಂಪೂರ್ಣ ಅರಿಯುವಲ್ಲಿ ಸಫಲವಾಗಿದೆ ಎಂದು ಮೆಲ್ಬರ್ನ್ ವಿಶ್ವವಿದ್ಯಾಲಯದ ಸಂಶೋಧಕರ ತಂಡದ ಮುಖ್ಯಸ್ಥ ಡಾ.ಮಾಥ್ಯೂ ಡಿಕ್ಸನ್ ಹೇಳಿದ್ದಾರೆ.

ಮಲೇರಿಯಾ ಸೂಕ್ಷ್ಮಾಣುಜೀವಿಗಳು ನಿಗದಿತ ಅವಧಿಯಲ್ಲಿ ಹೀಗೆ ಬಾಳೆಹಣ್ಣಿನ ಆಕಾರಕ್ಕೆ ಮಾರ್ಪಾಡಾಗಲು ನಿರ್ದಿಷ್ಟ ಪ್ರೊಟೀನ್‌ಗಳೇ ಕಾರಣ. ಆ ಪ್ರೊಟೀನ್‌ಗಳು ಯಾವುದೆಂಬುದನ್ನು ಕಂಡುಹಿಡಿದಿದ್ದೇವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.