ADVERTISEMENT

ಮಹಿಳಾ ಸ್ನೇಹಿ ಉದ್ಯೋಗ ನೀತಿಗೆ ಸಲಹೆ

ಜಪಾನ್‌ನಲ್ಲಿ ಜನನ ಪ್ರಮಾಣ ಕುಸಿತ ತಡೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 19:59 IST
Last Updated 10 ಜುಲೈ 2013, 19:59 IST
ಮಹಿಳಾ ಸ್ನೇಹಿ ಉದ್ಯೋಗ ನೀತಿಗೆ ಸಲಹೆ
ಮಹಿಳಾ ಸ್ನೇಹಿ ಉದ್ಯೋಗ ನೀತಿಗೆ ಸಲಹೆ   

ನ್ಯೂಯಾರ್ಕ್ (ಕ್ಯೋಡೊ): ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಪೂರಕ ವಾತಾವರಣ ಹಾಗೂ ಮಕ್ಕಳ ಪೋಷಣೆಯಲ್ಲಿ ಪುರುಷರ ಸಹಭಾಗಿತ್ವದಿಂದ ಮಾತ್ರ ಜಪಾನಿನಲ್ಲಿ ಕುಸಿಯುತ್ತಿರುವ ಜನಸಂಖ್ಯೆ ಪ್ರಮಾಣವನ್ನು ತಡೆಗಟ್ಟಬಹುದು ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ.

ಜಪಾನಿನಲ್ಲಿ ವರ್ಷದಿಂದ ವರ್ಷಕ್ಕೆ ಜನನ ಪ್ರಮಾಣ ಕುಸಿಯುತ್ತಿದ್ದು, ಮಾನವ ಸಂಪನ್ಮೂಲದ ಕೊರತೆ ಉಂಟಾಗುವ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಬಾಬಾತುಂದೆ ಒಸೊಟಿಮೆಹಿನ್ ಅವರು ಹೀಗೆ ಹೇಳಿದ್ದಾರೆ.

ಅಭಿವೃದ್ಧಿ  ಹೊಂದಿದ ರಾಷ್ಟ್ರವಾಗಿರುವ ಜಪಾನ್‌ನಲ್ಲಿ ಪುರುಷ ಮತ್ತು ಮಹಿಳೆ ಇಬ್ಬರೂ ಸರಿಸಮಾನವಾಗಿ ವೃತ್ತಿ ಬದುಕಿನಲ್ಲಿ ಸಾಧನೆ ಮೆರೆಯುತ್ತಿದ್ದಾರೆ. ಆದರೆ, ಬಸಿರು, ಹೆರಿಗೆ, ಬಾಣಂತನದ ಕಾರಣಗಳಿಂದಾಗಿ ಅಲ್ಲಿನ ಉದ್ಯೋಗಸ್ಥ ಮಹಿಳೆಯರು ವೃತ್ತಿಯಲ್ಲಿ ಬಡ್ತಿ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ವೃತ್ತಿನಿರತ ಮಹಿಳೆಯರು ತಾಯಂದಿರಾಗುವ ಕಡೆಗೆ ಗಮನ ನೀಡುತ್ತಿಲ್ಲ. ಹೀಗಾಗಿ ಅಲ್ಲಿನ ಜನಸಂಖ್ಯಾ ಪ್ರಮಾಣದಲ್ಲಿ ತೀವ್ರ ಇಳಿಮುಖವಾಗಿದೆ.

ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಮಗುವಿನ ಪೋಷಣೆಗೆ ಸೂಕ್ತ ಪರಿಸರ, ಬಸಿರು- ಹೆರಿಗೆ- ಬಾಣಂತನದ ನಡುವೆಯೂ ಮಹಿಳೆಯರಿಗೆ ವೃತ್ತಿಯಲ್ಲಿ ಬಡ್ತಿ ಹಾಗೂ ಮಗುವಿನ ಪೋಷಣೆಯಲ್ಲಿ ಪುರುಷರ ಸಹಭಾಗಿತ್ವದ ವಾತಾವರಣ ಕಲ್ಪಿಸಿದಲ್ಲಿ ಈ ಕುಸಿತಕ್ಕೆ ತಡೆಯೊಡ್ಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಒಸೊಟಿಮೆಹಿನ್, ಈ ಸಲಹೆಗಳನ್ನು ಜಪಾನ್ ಸರ್ಕಾರವು ಖಾಸಗಿ ರಂಗದಲ್ಲೂ ಜಾರಿಗೆ ತರಬೇಕು ಎಂದು ಹೇಳಿದ್ದಾರೆ.

ಡೆನ್ಮಾರ್ಕ್, ಸ್ವೀಡನ್, ಫ್ರಾನ್ಸ್ ಮತ್ತು ಇತ್ತೀಚೆಗೆ ಬ್ರಿಟನ್ ಕೂಡಾ ಜನಸಂಖ್ಯೆ ಪ್ರಮಾಣ ಕುಸಿತ ತಡೆಗಟ್ಟಲು ಹಲವು ಯೋಜನೆಗಳನ್ನು ಜಾರಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.