ADVERTISEMENT

ಮಾಲ್ಡೀವ್ಸ್ : ನಶೀದ್‌ಗೆ ಬಹುಮತ ಕೊರತೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2013, 19:59 IST
Last Updated 8 ಸೆಪ್ಟೆಂಬರ್ 2013, 19:59 IST

ಮಾಲೆ (ಪಿಟಿಐ): ಮಾಲ್ಡೀವ್ಸ್‌ನಲ್ಲಿ ನಡೆದ ಮೊದಲ ಹಂತದ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ 45ರಷ್ಟು ಮತಗಳನ್ನು ಪಡೆಯುವ ಮೂಲಕ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ನಶೀದ್ ಸ್ಪಷ್ಟ ಜಯ ಸಾಧಿಸಿದ್ದಾರೆ.

ಆದರೆ, ಸರ್ಕಾರ ನಡೆಸಲು ಸ್ಪಷ್ಟ ಬಹುಮತದ (ಕನಿಷ್ಠ ಶೇ 50ರಷ್ಟು ಮತ ಪಡೆಯಬೇಕು) ಕೊರತೆ ಎದುರಾಗಿರುವುದರಿಂದ ಸೆಪ್ಟೆಂಬರ್ 28ರಂದು ನಡೆಯಲಿರುವ ಎರಡನೇ ಹಂತದ ಚುನಾವಣೆ ನಿರ್ಣಾಯಕವಾಗಲಿದೆ.

ಶನಿವಾರ ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ ರಾತ್ರಿ ಪೂರ್ತಿ ನಡೆದಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಆಯ್ಕೆಯಾಗಿದ್ದ ಮೊದಲ ಅಧ್ಯಕ್ಷ 46 ವರ್ಷದ ನಶೀದ್ ಅವರು 95,224 ಮತಗಳನ್ನು ಪಡೆಯುವ ಮೂಲಕ ಸ್ಪಷ್ಟ ಗೆಲುವು ಪಡೆದಿದ್ದಾರೆ ಎಂದು ಚುನಾವಣಾ ಆಯೋಗ ಭಾನುವಾರ ಘೋಷಿಸಿದೆ.

ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಅಬ್ದುಲ್ ಗಯೂಮ್ ಅವರ ಸಹೋದರ ಅಬ್ದುಲ್ಲಾ ಯಾಮೀನ್ ಶೇ 25.35ರಷ್ಟು (53,099) ಮತಗಳನ್ನು ಪಡೆದಿದ್ದಾರೆ. ಜುಮ್‌ಹೂರೀ ಪಕ್ಷದ ಗಾಸಿಮ್ ಇಬ್ರಾಹಿಂ ಶೇ 24.07, ಮತ್ತೊಬ್ಬ ಅಭ್ಯರ್ಥಿ ಹಾಲಿ ಅಧ್ಯಕ್ಷ ವಹೀದ್ ಹಸನ್ ಶೇ 5.13ರಷ್ಟು ಮತಗಳನ್ನು ಪಡೆದಿದ್ದಾರೆ.

`ಇದು ಕೇವಲ ಪ್ರಾಥಮಿಕ ಫಲಿತಾಂಶಗಳಷ್ಟೇ. ಇನ್ನೆರಡು ದಿನಗಳಲ್ಲಿ ವಿವಿಧ ದ್ವೀಪಗಳಿಂದ ಎಲ್ಲಾ ಮತಪತ್ರಗಳನ್ನು ನಾವು ಪಡೆಯಲಿದ್ದೇವೆ. ಸೆಪ್ಟೆಂಬರ್ 14ರ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು. ಆದರೆ ಇನ್ನೂ ಬರಬೇಕಾಗಿರುವ ಮತಪತ್ರಗಳು ಫಲಿತಾಂಶದ ಮೇಲೆ ಹೆಚ್ಚಿನ ಪ್ರಭಾವ ಬೀರಲಾರವು' ಎಂದು ಚುನಾವಣಾ ಆಯೋಗದ ಅಧ್ಯಕ್ಷ ಫುವದ್ ತೌಫೀಕ್ ಹೇಳಿದ್ದಾರೆ.

ದೇಶದ ಚುನಾವಣಾ ಕಾನೂನುಗಳ ಪ್ರಕಾರ, ಒಂದು ವೇಳೆ ಯಾವುದೇ ಅಭ್ಯರ್ಥಿ ಶೇ 50ರಷ್ಟು ಮತಗಳನ್ನು ಪಡೆಯದೇ ಹೋದರೆ, ಅತೀ ಹೆಚ್ಚು ಮತಗಳನ್ನು ಪಡೆದ ಇಬ್ಬರು ಅಭ್ಯರ್ಥಿಗಳ ನಡುವೆ ಮತ್ತೆ ಸ್ಪರ್ಧೆ ನಡೆಸಲಾಗುತ್ತದೆ. ಅಂತಿಮ ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗದಿದ್ದರೆ ಸೆಪ್ಟೆಂಬರ್ 28ರಂದು ನಡೆಯಲಿರುವ ಮರುಚುನಾವಣೆಯಲ್ಲಿ ನಶೀದ್ ಅಬ್ದುಲ್ಲಾ ಯಾಮೀನ್ ಅವರನ್ನು ಎದುರಿಸಬೇಕಾಗುತ್ತದೆ.

`ಭಾರತ ಅತ್ಯಂತ ಪ್ರಮುಖ ರಾಷ್ಟ್ರ'
`ಮಾಲ್ಡೀವ್ಸ್ ಜನರಿಗೆ ಭಾರತ ಅತ್ಯಂತ ಪ್ರಮುಖ ರಾಷ್ಟ್ರ' ಎಂದು ಮೊದಲ ಸುತ್ತಿನ ಚುನಾವಣೆಯಲ್ಲಿ ಜಯಶಾಲಿಯಾಗಿರುವ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಅಭಿಪ್ರಾಯಪಟ್ಟಿದ್ದಾರೆ. `ಭಾರತೀಯರ ಮತ್ತು ಮಾಲ್ಡೀವ್ಸ್ ಜನರ ಮೂಲ ಒಂದೇ. ನಾವು ಒಂದೇ ರೀತಿಯ ಸಂಗೀತವನ್ನು ಆಲಿಸುತ್ತೇವೆ. ಒಂದೇ ರೀತಿಯ ಪುಸ್ತಕಗಳನ್ನು ಓದುತ್ತೇವೆ. ನಮ್ಮ ಆಹಾರ ಕ್ರಮವೂ ಒಂದೇ. ಹಾಗಾಗಿ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಎರಡು ರಾಷ್ಟ್ರಗಳ ಜನರು ಬೇರೆ ಬೇರೆ ಎನ್ನಲು ಕಷ್ಟ' ಎಂದು ನಶೀದ್ ಹೇಳಿದ್ದಾರೆ. ಭಾನುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಚೀನಾದ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ನಶೀದ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT