ADVERTISEMENT

ಮಾಲ್ಡೀವ್ಸ್: ಭುಗಿಲೆದ್ದ ಹಿಂಸಾಚಾರ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 19:30 IST
Last Updated 9 ಫೆಬ್ರುವರಿ 2012, 19:30 IST

ಮಾಲೆ (ಎಎಫ್‌ಪಿ): ಪೂರ್ವ ನಿಯೋಜಿತ ಪಿತೂರಿಗೆ ತಾವು ಬಲಿಯಾಗಿದ್ದು, ಬಲವಂತವಾಗಿ ತಮ್ಮಿಂದ ರಾಜೀನಾಮೆ ಪಡೆಯಲಾಗಿದೆ ಎಂದು ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಅವರು ಹೇಳಿದ ಬೆನ್ನಲ್ಲೇ ಮಾಲ್ಡೀವ್ಸ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ದ್ವೀಪ ಸಮೂಹದಲ್ಲಿ  ತಲೆದೂರಿರುವ ಅರಾಜಕ ಸ್ಥಿತಿಯನ್ನು ನಿಯಂತ್ರಿಸಲು ಮತ್ತು ಹಿಂಸಾಚಾರ ಹತ್ತಿಕ್ಕಲು ತುರ್ತು ಕ್ರಮಕ್ಕೆ ಮುಂದಾಗಿರುವ ನೂತನ ಅಧ್ಯಕ್ಷ ಮೊಹಮ್ಮದ್ ವಾಹಿದ್ ಹಸನ್, ತುರ್ತಾಗಿ ಗೃಹ ಮತ್ತು ರಕ್ಷಣಾ ಸಚಿವರನ್ನು ನೇಮಕ ಮಾಡಿದ್ದಾರೆ. 

 ನಿವೃತ್ತ ಕರ್ನಲ್ ಮೊಹಮ್ಮದ್ ನಜೀಮ್ ಮತ್ತು ವಕೀಲ ಮೊಹಮ್ಮದ್ ಜಮೀಲ್ ಅಹಮದ್ ಅವರನ್ನು ಕ್ರಮವಾಗಿ ರಕ್ಷಣಾ ಮತ್ತು ಗೃಹ ಸಚಿವರನ್ನಾಗಿ ನೇಮಕ ಮಾಡಲಾಗಿದೆ ಎಂದು ಅಧ್ಯಕ್ಷರ ನಿಕಟವರ್ತಿ ಮೊಹಮ್ಮದ್ ಶರೀಫ್ ಗುರುವಾರ ಪ್ರಕಟಿಸಿದ್ದಾರೆ. ರಾಷ್ಟ್ರೀಯ ಐಕ್ಯಮತದ ಸರ್ಕಾರ ರಚನೆ ಇನ್ನೂ ವಿಳಂಬವಾಗುವ ಕಾರಣ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಈ  ನೇಮಕ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ನಡುವೆ ಮತ್ತೊಂದು ಅನಿರೀಕ್ಷಿತ ಬೆಳವಣಿಗೆಯಲ್ಲಿ, ಮಾಜಿ ಅಧ್ಯಕ್ಷ ನಶೀದ್ ಮತ್ತು ಮಾಜಿ ರಕ್ಷಣಾ ಸಚಿವ ಆದಮ್ ಗಫೂರ್ ಅವರ ವಿರುದ್ಧ ಕ್ರಿಮಿನಲ್ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿದೆ.

ನಗರದಲ್ಲಿ ಬುಧವಾರ ರಾತ್ರಿ ಬೀದಿಗಿಳಿದ ಮಾಲ್ಡೀವ್ಸ್ ಪ್ರಜಾಸತ್ತಾತ್ಮಕ ಪಕ್ಷದ (ಎಂಡಿಪಿ) ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ನೇರವಾಗಿ ಸೇನೆ ಮತ್ತು ಪೊಲೀಸರೊಂದಿಗೆ ಸಂಘರ್ಷ ನಡೆಸಿದರು. ಪೊಲೀಸ್ ಠಾಣೆ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದರು. ಇದರಿಂದ, ಕಳೆದ ಸಾರ್ಕ್ ಸಮ್ಮೇಳನ ನಡೆದಿದ್ದ ಅಡ್ಡು ದ್ವೀಪದಲ್ಲಿ ಪೊಲೀಸ್ ವಾಹನ, ಕಟ್ಟಡಗಳು ಹೊತ್ತಿ ಉರಿದವು. ಹಿಂಸಾಚಾರದಲ್ಲಿ ಮೂವರು ಸಾವಿಗೀಡಾಗಿರುವ ಶಂಕೆ ಇದ್ದು, ಹಲವಾರು ಎಂಡಿಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಲಂಕಾಗೆ ತೆರಳಿದ ನಶೀದ್ ಕುಟುಂಬ

ಮಾಲ್ಡೀವ್ಸ್‌ನಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ, ನಶೀದ್ ಅವರ ಪತ್ನಿ ಮತ್ತು ಇಬ್ಬರು ಪುತ್ರಿಯರು ಶ್ರೀಲಂಕಾಗೆ ತೆರಳಿದ್ದು, ಅಲ್ಲಿಯ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.

ಅವರಿಗೆ ಅಗತ್ಯ ರಕ್ಷಣೆ ಒದಗಿಸುವುದಾಗಿ ಭರವಸೆ ನೀಡಿರುವ ರಾಜಪಕ್ಸೆ, ನಶೀದ್ ಅವರಿಗೆ ಸಂಪೂರ್ಣ ರಕ್ಷಣೆ ಒದಗಿಸುವಂತೆ ಮಾಲ್ಡೀವ್ಸ್ ನೂತನ ಅಧ್ಯಕ್ಷರಿಗೆ  ಮನವಿ ಮಾಡಿದ್ದಾರೆ. `ಇದು ಆ ದೇಶದ ಆಂತರಿಕ ವಿಚಾರವಾಗಿದ್ದು, ನಾವು ಮೂಗು ತೂರಿಸುವುದಿಲ್ಲ. ಅವರೇ ಸಂವಿಧಾನದ ಪ್ರಕ್ರಿಯೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ~ ಎಂದಿದ್ದಾರೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.