ADVERTISEMENT

ಮುಂಗಾರು ಮಾಹಿತಿಗೆ ಹೊಸ ತಂತ್ರ

ಫ್ಲಾರಿಡಾ ವಿಶ್ವವಿದ್ಯಾಲಯದಿಂದ ಅಧ್ಯಯನ

ಪಿಟಿಐ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST
ಮುಂಗಾರು ಮಾಹಿತಿಗೆ ಹೊಸ ತಂತ್ರ
ಮುಂಗಾರು ಮಾಹಿತಿಗೆ ಹೊಸ ತಂತ್ರ   

ವಾಷಿಂಗ್ಟನ್‌: ಭಾರತದಲ್ಲಿನ ಮುಂಗಾರು ಮುನ್ಸೂಚನೆಯನ್ನು ನಿಖರವಾಗಿ ತಿಳಿದುಕೊಳ್ಳಲು ವಿಜ್ಞಾನಿಗಳು ಹೊಸ ವಿಧಾನಗಳನ್ನು ಕಂಡುಕೊಂಡಿದ್ದಾರೆ.

105 ವರ್ಷಗಳ ಮಳೆ ಪ್ರಮಾಣದ ವರದಿಗಳನ್ನು ಬಳಸಿಕೊಂಡು ಭಾರತದಲ್ಲಿನ ಮುಂಗಾರು ಕುರಿತು ಅಮೆರಿಕದ ಫ್ಲಾರಿಡಾ ವಿಶ್ವವಿದ್ಯಾಲಯದ ಸಂಶೋಧಕರು ಈ ವಿಧಾನಗಳನ್ನು ರೂಪಿಸಿದ್ದಾರೆ.

‘ಈಗಿರುವ ವ್ಯವಸ್ಥೆಯಲ್ಲಿ ಖಚಿತವಾದ ಮಾಹಿತಿಗಳು ದೊರೆಯುತ್ತಿಲ್ಲ. ಸದ್ಯಕ್ಕೆ ಒಂದು ಸ್ಥಳದ ಬಗ್ಗೆ ಅತಿ ಹೆಚ್ಚು ನಿಗಾ ವಹಿಸಲಾಗಿದೆ. ವಿಶೇಷವಾಗಿ ಕೇರಳದಲ್ಲಿ ಬದಲಾಗುವ ಹವಾಮಾನದ ಬಗ್ಗೆಯೇ ಹೆಚ್ಚು ಗಮನ ನೀಡಲಾಗುತ್ತದೆ. ಅಲ್ಲಿ ದೊರೆಯುವ ಹವಾಮಾನ ಮುನ್ಸೂಚನೆಯ ಮಾಹಿತಿಯನ್ನು ದೇಶದ ಉಳಿದ ಭಾಗಕ್ಕೂ ಅನ್ವಯಿಸಲಾಗುತ್ತಿದೆ’ ಎಂದು ಫ್ಲಾರಿಡಾ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ವಾಸು ಮಿಶ್ರಾ ತಿಳಿಸಿದ್ದಾರೆ.

ADVERTISEMENT

‘ನಾವು ಇಡೀ ಭಾರತದ ಬಗ್ಗೆ ವಿಶ್ಲೇಷಣೆ ನಡೆಸಿದ್ದೇವೆ. ಇದರಿಂದ ನಿಖರವಾಗಿ ಮುಂಗಾರು ಆರಂಭ ಮತ್ತು ಅಂತ್ಯದ ದಿನಾಂಕಗಳನ್ನು ತಿಳಿಸಲು ಸಾಧ್ಯ’  ಎಂದು ಅವರು ತಿಳಿಸಿದ್ದಾರೆ.

‘ಭಾರತದಲ್ಲಿನ ಮುಂಗಾರು ಕುರಿತು ಸ್ಪಷ್ಟ ಮತ್ತು ನಿಖರ ಮಾಹಿತಿ ಕೊರತೆ ಇದೆ. ದೇಶದ ಕೆಲವು ಭಾಗಗಳಲ್ಲಿ ಮುಂಗಾರು ಋತುವಿನಲ್ಲೇ ವಾರ್ಷಿಕ ಮಳೆಯ ಶೇಕಡ 90ರಷ್ಟು ಮಳೆಯಾಗುತ್ತದೆ. ಸುಳ್ಳು ಅಥವಾ ತಪ್ಪು ಮಾಹಿತಿ ಭಾರತದ ರಾಜಕೀಯ ಮತ್ತು ಕೃಷಿ ಜೀವನವನ್ನು ಅಸ್ಥಿರಗೊಳಿಸುವ ಸಾಧ್ಯತೆಗಳಿವೆ. ಇದರಿಂದ ಸಾರ್ವಜನಿಕರು ಹತಾಶೆ ಮತ್ತು ಗೊಂದಲಕ್ಕೆ ಸಿಲುಕುತ್ತಿದ್ದಾರೆ’ ಎಂದು ಅವರು ವಿಶ್ಲೇಷಿಸಿದ್ದಾರೆ.

‘ಹೊಸ ಪದ್ಧತಿಯಲ್ಲಿ ನಿರ್ದಿಷ್ಟವಾದ ಸ್ಥಳಗಳ ಆಧಾರದ ಮೇಲೆ ಮುಂಗಾರು ಕುರಿತು ಅಧ್ಯಯನ ನಡೆಸಲಾಗಿದೆ. ಪ್ರಾದೇಶಿಕ ಹವಾಮಾನ ಇಲಾಖೆಗಳು ಇದುವರೆಗೆ ತಮ್ಮದೇ ಆದ ಸ್ವಂತ ಮಾನದಂಡಗಳನ್ನಿಟ್ಟುಕೊಂಡು ಮುಂಗಾರು ಬಗ್ಗೆ ಮಾಹಿತಿ ನೀಡುತ್ತಿವೆ. ಆದರೆ, ಈ ಮಾಹಿತಿಗಳು ನಿಖರವಾಗಿಲ್ಲ ಮತ್ತು ಹಲವು ಬಾರಿ ಸುಳ್ಳಾಗಿವೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಹಲವು ಸ್ಥಳಗಳ ಬಗ್ಗೆ ಅಧ್ಯಯನ ನಡೆಸುವುದರಿಂದ ಮಳೆ ಕುರಿತು ಹೆಚ್ಚು ಮಾಹಿತಿ ದೊರೆಯುತ್ತದೆ. ನಾವು 105 ವರ್ಷಗಳ ಮಳೆಯ ಮಾಹಿತಿಯನ್ನು ವಿಶ್ಲೇಷಣೆ ನಡೆಸಿ ಮುಂಗಾರು ಕುರಿತು ಪರೀಕ್ಷೆಗಳನ್ನು ಕೈಗೊಂಡಿದ್ದೇವೆ. ನಾವು ರೂಪಿಸಿರುವ ಮಾನದಂಡಗಳು ಇದುವರೆಗೆ ಒಂದು ಬಾರಿಯೂ ವಿಫಲವಾಗಿಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.