ADVERTISEMENT

ಮುಂಬೈ ದಾಳಿಯಲ್ಲಿ ಐಎಸ್‌ಐ ನಂಟು: ಹೆಡ್ಲಿ ಪುನರುಚ್ಚಾರ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 19:30 IST
Last Updated 13 ಜೂನ್ 2011, 19:30 IST

ವಾಷಿಂಗ್ಟನ್ (ಪಿಟಿಐ): ಮುಂಬೈ ದಾಳಿಯಲ್ಲಿ ಐಎಸ್‌ಐ ಸಂಚು ರೂಪಿಸಿರುವುದನ್ನು ಪುನರುಚ್ಚರಿಸಿರುವ ಶಂಕಿತ ಉಗ್ರ ಡೇವಿಡ್ ಹೆಡ್ಲಿ, ಇದಕ್ಕಾಗಿ ಐಎಸ್‌ಐ ಅಧಿಕಾರಿಗಳು ಮತ್ತು ಏಜೆಂಟ್‌ಗಳು (ಎನ್‌ಸಿಒ) ತನಗೆ ನೂರಾರು ಗಂಟೆ ಕಾಲ ತರಬೇತಿ ನೀಡಿರುವುದನ್ನು ಮತ್ತೆ ದೃಢಪಡಿಸಿದ್ದಾನೆ.

ಇದರಿಂದ ಹೆಡ್ಲಿ ಮತ್ತು ಐಎಸ್‌ಐ ನಂಟನ್ನು ನಿರಾಕರಿಸುತ್ತಾ ಬಂದಿರುವ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗವಾದಂತಾಗಿದೆ. ಲಾಹೋರ್‌ನ ಎರಡಂತಸ್ತಿನ ಸುರಕ್ಷಿತ ಮನೆಯೊಂದರಲ್ಲಿ ಐಎಸ್‌ಐ ತನಗೆ ಯಾರಿಗೂ ಅನುಮಾನ ಉಂಟಾಗದಂತೆ ವೇಷ ಮರೆಸಿಕೊಳ್ಳುವ ಮತ್ತು ಭಾರತೀಯರ ವಿಶ್ವಾಸ ಸಂಪಾದಿಸುವ ಕುರಿತು ಮಾರ್ಗದರ್ಶನ ನೀಡಿತ್ತು.

ಅಲ್ಲಿ ಐಎಸ್‌ಐನ ಮೇಜರ್ ಇಕ್ಬಾಲ್ ಸೇರಿದಂತೆ ದಾಳಿಯ ಪ್ರಮುಖ ಸಂಚುದಾರರೆಲ್ಲಾ ಸೇರಿ ಚರ್ಚಿಸುತ್ತಿದ್ದೆವು ಎಂದು ಹೆಡ್ಲಿ ಷಿಕಾಗೊ ಕೋರ್ಟ್‌ನಲ್ಲಿ ಬಹಿರಂಗಪಡಿಸಿದ್ದಾನೆ.

ಮುಂಬೈ ದಾಳಿಗೆ ಸಿದ್ಧತೆ ನಡೆಸಲು ಲಷ್ಕರ್ ಎ ತೊಯ್ಬಾ ನೀಡಿದ್ದ ತರಬೇತಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದ ಮೇಜರ್ ಇಕ್ಬಾಲ್, ಇತರ ಅಧಿಕಾರಿಗಳಿಂದ ಹೆಚ್ಚಿನ ತರಬೇತಿಗೆ ಆಯೋಜಿಸಿದನು. ದಾಳಿ ನಡೆಸಲು ಉದ್ದೇಶಿಸಿರುವ ಪ್ರದೇಶಗಳ ಪೂರ್ವ ವೀಕ್ಷಣೆ ಮತ್ತು ಮಾಹಿತಿ ಸಂಗ್ರಹಕ್ಕಾಗಿ ಮಾತ್ರ ಬಳಸಿಕೊಳ್ಳುವ ಲಷ್ಕರ್ ಉದ್ದೇಶದ ಬಗ್ಗೆ ಆತ ಚರ್ಚಿಸಿದ್ದ.
 
ತನ್ನನ್ನು ಐಎಸ್‌ಐ ಮಾಹಿತಿದಾರನಾಗಿ ಸಹ ಉಪಅಯೋಗಿಸಿಕೊಳ್ಳುವ ಕುರಿತು ಮಾತನಾಡಿದ್ದ ಎಂದು ಹೆಡ್ಲಿ ಹೇಳಿದ್ದಾನೆ.ದೂರವಾಣಿ ಸಂಭಾಷಣೆ ವೇಳೆ ಐಎಸ್‌ಐ ಅನ್ನು `ಮಿಸ್ಟರ್ ಬಾಲಾಸ್ ಕಂಪೆನಿ~ ಎಂಬ ಗುಪ್ತ ಸಂಕೇತದಿಂದ ಕರೆಯಲಾಗುತ್ತಿತ್ತು.

ಜನರಲ್ಲಿ ನಂಬಿಕೆ ಮೂಡಿಸುವುದು, ವಿಶ್ವಾಸಾರ್ಹತೆ ಗಳಿಸಲು ಸುಳ್ಳು ಕಥೆ ಸೃಷ್ಟಿ, ಸಂದೇಹಕ್ಕೆ ಎಡೆ ಮಾಡದಂತೆ ವಿಡಿಯೊ ಚಿತ್ರೀಕರಣ, ಬೇಹುಗಾರಿಕೆ ಮುಂತಾದವುಗಳ ತರಬೇತಿಯನ್ನು ತನಗೆ ನೀಡಲಾಗಿತ್ತು ಎಂದು ತಿಳಿಸಿದ್ದಾನೆ.

ಉಗ್ರ ಸಂಘಟನೆಗಳಾದ ಲಷ್ಕರ್ ಎ ತೊಯ್ಬಾ ಮತ್ತು ಜೈಷ್‌ಗಳು ಐಎಸ್‌ಐನ ಅಡಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದವು. ಅವುಗಳ ನಡುವೆ ಪರಸ್ಪರ ಸಹಕಾರವಿದ್ದು, ಐಎಸ್‌ಐ ಲಷ್ಕರ್‌ಗೆ ಆರ್ಥಿಕ, ಸೇನಾ ಮತ್ತು ನೈತಿಕ ಬೆಂಬಲ ನೀಡುತ್ತಿತ್ತು ಎಂದು ಹೆಡ್ಲಿ ಹೇಳಿದ್ದಾನೆ.

 ಬೇರೆ ಬೇರೆ ಸಮಯಗಳಲ್ಲಿ ನೂರಾರು ಬಾರಿ ತರಬೇತಿಗಾಗಿ ಲಾಹೋರ್ ಮನೆಗೆ ತೆರಳಿರುವುದಾಗಿ ಹೆಡ್ಲಿ ಹೇಳಿದ್ದಾನೆ. ತಾನು ಭಾರತಕ್ಕೆ ತೆರಳಲಿದ್ದು, ಹೆಸರು ಬದಲಾವಣೆಗಾಗಿ ಅರ್ಜಿ ಸಲ್ಲಿಸಿದ್ದೇನೆ. ಅದನ್ನು ಶೀಘ್ರ ಪಡೆದುಕೊಳ್ಳಲಿದ್ದೇನೆ ಎಂದೂ ಮಾತುಕತೆ ವೇಳೆ ಇಕ್ಬಾಲ್‌ಗೆ ತಿಳಿಸಿದ್ದಾಗಿ, ಅದರಿಂದ ಆತ ಸಂತುಷ್ಟನಾಗಿದ್ದಾಗಿ ಹೆಡ್ಲಿ ಬಹಿರಂಗಪಡಿಸಿದ್ದಾನೆ.

ಖೈಬರ್ ರೈಫಲ್ಸ್ ರೆಜಿಮೆಂಟ್ ಸೆಂಟರ್ ಐಎಸ್‌ಐನ ಮೇಜರ್ ಅಲಿ ಹಾಗೂ ತನ್ನ ನಡುವಿನ ಸಂಪರ್ಕದ ಬಗ್ಗೆಯೂ ಆತ ಬಾಯಿ ಬಿಟ್ಟಿದ್ದಾನೆ.ಐಎಸ್‌ಐ ಜಿಹಾದ್ ಕುರಿತಂತೆ ತನ್ನದೇ ವ್ಯಾಖ್ಯಾನ ಹೊಂದಿದ್ದು, ಪಾಕ್‌ನ ಇಸ್ಲಾಂ ಧರ್ಮದ ಮೂಲಭೂತವಾದಿಗಳಲ್ಲಿ ಈ ಸಿದ್ಧಾಂತವನ್ನು ಬಿತ್ತುತ್ತಿತ್ತು.

ಅಲ್ ಖೈದಾದೊಂದಿಗೆ ಸಂಪರ್ಕ ಹೊಂದಿದ್ದ, ಉಗ್ರ ಇಲ್ಯಾಸ್ ಕಾಶ್ಮೀರಿ ಐಎಸ್‌ಐ ಜೊತೆಗೂಡಿ ಕಾರ್ಯನಿರ್ವಹಿಸಿದ್ದನು ಎಂದು ಹೇಳಿದ್ದಾನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.