ADVERTISEMENT

‘ಮುಂಬೈ ದಾಳಿ ಜೊತೆಗಿನ ಷರೀಫ್‌‌ ಸಂಬಂಧ ಸುಳ್ಳು: ಪಾಕಿಸ್ತಾನ

ಏಜೆನ್ಸೀಸ್
Published 14 ಮೇ 2018, 14:18 IST
Last Updated 14 ಮೇ 2018, 14:18 IST

ಇಸ್ಲಾಮಾಬಾದ್‌: 2008ರ ಮುಂಬೈ ದಾಳಿ ಪ್ರಕರರಣಕ್ಕೂ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರಿಗೂ ಸಂಬಂಧವಿದೆ ಎಂಬ ಸುದ್ದಿಯನ್ನು ಅಲ್ಲಗಳೆದಿರುವ ಪಾಕಿಸ್ತಾನ, ಇದನ್ನು ‘ಸಂಪೂರ್ಣ ಸುಳ್ಳು’ ಎಂದಿದೆ ಎಂದು ಜಿಯೋ ಟಿವಿ ವರದಿ ಮಾಡಿದೆ.

ದೇಶದ ಉಚ್ಚಾಟಿತ ಪ್ರಧಾನಿ ಷರೀಫ್‌ ಕುರಿತ ‘ಮಾಧ್ಯಮಗಳ ತಪ್ಪಾದ ಹೇಳಿಕೆ’ ಸಂಬಂಧವಾಗಿ ಚರ್ಚಿಸಲು ಪಾಕಿಸ್ತಾನ ರಾಷ್ಟ್ರೀಯ ರಕ್ಷಣಾ ಸಮಿತಿ ಪ್ರಧಾನಿ ಶಾಹೀದ್‌ ಕೌನಾನ್‌ ಅಬ್ಬಾಸಿ ಅವರೊಡನೆ ಸಭೆ ನಡೆಸಿದೆ ಎಂದೂ ವಾಹಿನಿ ತಿಳಿಸಿದೆ.

ADVERTISEMENT

ಅಬ್ಬಾಸಿ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಸೇನೆಯ ಹಿರಿಯ ನಾಯಕರು, ವಿದೇಶಾಂಗ ಸಚಿವರು, ನೌಕಾಪಡೆ–ವಾಯುಪಡೆ ಮುಖ್ಯಸ್ಥರು ಹಾಜರಿದ್ದರು ಎನ್ನಲಾಗಿದ್ದು, ಮಾತುಕತೆಯ ಬಳಿಕ ಪ್ರಧಾನಿ ಕಾರ್ಯಾಲಯ ಪ್ರಕಟಣೆ ಹೊರಡಿಸಿದೆ. ಅದರಲ್ಲಿ ’ವಾಸ್ತವ ಮತ್ತು ಸತ್ಯಗಳನ್ನು ಕಡೆಗಣಿಸಿ ತಪ್ಪು ಅಭಿಪ್ರಾಯವನ್ನು ಪ್ರಚಾರಮಾಡುತ್ತಿರುವುದು ಅತ್ಯಂತ ದುರದೃಷ್ಟಕರ’ ಎಂದು ಉಲ್ಲೇಖಿಸಲಾಗಿದೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಷರೀಫ್‌ ಪಾಕಿಸ್ತಾನದಲ್ಲಿ ಉಗ್ರಸಂಘಟನೆಗಳು ಸಕ್ರಿಯವಾಗಿರುವುದನ್ನು ಒಪ್ಪಿಕೊಂಡಿದ್ದರು.

‘ಪಾಕಿಸ್ತಾನದಲ್ಲಿ ಉಗ್ರ ಸಂಘಟನೆಗಳು ಸಕ್ರಿಯವಾಗಿವೆ. ಸರ್ಕಾರೇತರ ಶಕ್ತಿಗಳು ದೇಶದ ಗಡಿದಾಟಿ ಹೋಗಿ ಮುಂಬೈನಲ್ಲಿರುವ 150ಕ್ಕೂ ಹೆಚ್ಚು ಜನರನ್ನು ಕೊಲ್ಲಲು ನಾವು ಅನುಮತಿ ನೀಡಬೇಕೆ? ಈ ಪ್ರಕರಣದ ವಿಚಾರಣೆಯನ್ನು ಮುಗಿಸಲು ಏಕೆ ಸಾಧ್ಯವಾಗುತ್ತಿಲ್ಲ? ಈ ಬಗ್ಗೆ ನನಗೆ ವಿವರಣೆ ನೀಡಿ’ ಎಂದು ಡಾನ್‌ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಪ್ರಶ್ನಿಸಿದ್ದರು.

ಪಾಕಿಸ್ತಾನ ಮುಸ್ಲಿಂ ಲೀಗ್‌ ಪಕ್ಷ ಕೂಡ ಷರೀಫ್‌ ವಿಚಾರವಾಗಿ ’ಭಾರತದ ಮಾಧ್ಯಮಗಳು ತಪ್ಪು ಮಾಹಿತಿ ಪ್ರಕಟಿಸುತ್ತಿವೆ’ ಎಂದು ಭಾನುವಾರ(ಮೇ 13) ಹೇಳಿತ್ತು.

2008ರ ನವೆಂಬರ್‌ನಲ್ಲಿ ಕರಾಚಿಯಿಂದ ಮುಂಬೈಗೆ ಬಂದಿದ್ದ ಲಷ್ಕರ್–ಇ–ತಯಬ ಉಗ್ರರು ದಾಳಿ ಸಂಘಟಿಸಿದ್ದರು. ಈ ವೇಳೆ 166 ಮಂದಿ ಮೃತಪಟ್ಟು, 300ಕ್ಕೂ ಹೆಚ್ಚಿನವರು ಗಾಯಗೊಂಡಿದ್ದರು.

ದಾಳಿ ವೇಳೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು 9 ಉಗ್ರರನ್ನು ಹತ್ಯೆಗೈದು, ಅಜ್ಮಲ್‌ ಕಸಬ್‌ನನ್ನು ಸೆರೆ ಹಿಡಿದಿದ್ದರು. ಈ ದಾಳಿ ನಡೆದು ಇದೀಗ 10 ವರ್ಷವಾಗಿದ್ದು, ಪಾಕ್‌ ಮೂಲದ ಇನ್ನೊಂದು ಸಂಘಟನೆ ಜಮಾತ್‌–ಉದ್‌–ದಾವಾದ ಉಗ್ರ ಹಫೀಜ್‌ ಸಯೀದ್‌ ಇದರ ರೂವಾರಿ ಎನ್ನಲಾಗಿತ್ತು.

ವಿಚಾರಣೆ ಬಳಿಕ ಕಸಬ್‌ನನ್ನು ಗಲ್ಲಿಗೇರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.