ADVERTISEMENT

ಮುಬಾರಕ್‌ಗೆ ಜರ್ಮನಿಯಲ್ಲಿ ಚಿಕಿತ್ಸೆ?ಶೇ 15ರಷ್ಟು ವೇತನ ಹೆಚ್ಚಳ: ಸಂಪುಟ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 15:30 IST
Last Updated 8 ಫೆಬ್ರುವರಿ 2011, 15:30 IST

ಕೈರೊ (ಡಿಪಿಎ):ಅಧ್ಯಕ್ಷ ಹೋಸ್ನಿ ಮುಬಾರಕ್ ಅವರ ಪದಚ್ಯುತಿಗಾಗಿ ಹೋರಾಟ ನಡೆಸುತ್ತಿರುವ ಈಜಿಪ್ಟ್ ಜನರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಸಚಿವ ಸಂಪುಟ ಸರ್ಕಾರಿ ಸ್ವಾಮ್ಯದ ನೌಕರರ ವೇತನ ಮತ್ತು ಪಿಂಚಣಿಯನ್ನು ಶೇ 15ರಷ್ಟು ಹೆಚ್ಚಿಸುವ ಭರವಸೆ ನೀಡಿದೆ. ಪ್ರತಿಭಟನೆಯ ಕಾವು ಸ್ವಲ್ಪ ತಗ್ಗಿದಂತೆ ಕಂಡುಬಂದರೂ ಇಂತಹ ಕೊಡುಗೆಗಳಿಗೆ ಜಗ್ಗುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ಪ್ರತಿಭಟನಾಕಾರರು ತಳೆದಿದ್ದಾರೆ.

ಕಳೆದ ತಿಂಗಳ ಕೊನೆಯಲ್ಲಿ ಕೆಲವು ಸಚಿವರನ್ನು ಕಿತ್ತು ಹಾಕಿ ಸಚಿವ ಸಂಪುಟವನ್ನು ಪುನರ್ ರಚಿಸಲಾಗಿತ್ತು. ಬಳಿಕ ನಡೆದ ಸಂಪುಟದ ಪ್ರಥಮ ಸಭೆಯಲ್ಲಿ ಬೊಕ್ಕಸಕ್ಕೆ 1.1 ಶತಕೋಟಿ ಡಾಲರ್‌ನಷ್ಟು ಹೊರೆ ಬೀಳುವ ಈ ಭರವಸೆ ನೀಡಲಾಗಿದೆ. ಈ ವೇತನ ಹೆಚ್ಚಳದ ಲಾಭ 60 ಲಕ್ಷ ಜನರಿಗೆ ಸಿಗಲಿದೆ. ಪ್ರಧಾನಿ ಅಹ್ಮದ್ ಶಫೀಕ್ ಸಭೆಯ ಬಳಿಕ ಈ ವಿಷಯ ತಿಳಿಸಿದರು.

ಈ ಮಧ್ಯೆ, ಕೈರೊ, ಅಲೆಕ್ಸಾಂಡ್ರಿಯಾ ಮತ್ತು ಸುಯೆಜ್‌ಗಳಲ್ಲಿ ಪ್ರತಿಭಟನೆಯ ಕಾವು ಸ್ವಲ್ಪ ಮಟ್ಟಿಗೆ ತಗ್ಗಿರುವುದರಿಂದ ಕರ್ಫ್ಯೂವನ್ನು ಕೆಲವು ಗಂಟೆಗಳ ಕಾಲ ಸಡಿಲಿಸಲಾಗಿದೆ ಎಂದು ಸೇನೆ ಹೇಳಿದೆ.  ತಹ್ರೀರ್ ಸ್ಕ್ವೇರ್‌ನಲ್ಲಿ ಈಗಲೂ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ.ಮತ್ತೊಂದೆಡೆ, ಮುಬಾರಕ್ ಅವರನ್ನು ಗೌರವಯುತವಾಗಿ ದೇಶದಿಂದ ಹೊರಕ್ಕೆ ಕಳುಹಿಸುವ ಕಾರ್ಯತಂತ್ರಗಳು ರೂಪುಗೊಳ್ಳತೊಡಗಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ಅವರಿಗೆ ಜರ್ಮನಿಯಲ್ಲಿ ಚಿಕಿತ್ಸೆ ಕೊಡಿಸುವ ಸಾಧ್ಯತೆ ಇದೆ.

ಉಪಾಧ್ಯಕ್ಷರಿಗೆ ಇಸ್ರೇಲ್ಜತೆಗೆ ನಿಕಟ ಸಂಪರ್ಕ!ಲಂಡನ್ (ಎಎಫ್‌ಪಿ): ಈಜಿಪ್ಟ್‌ನ ಉಪಾಧ್ಯಕ್ಷ ಒಮರ್ ಸುಲೇಮಾನ್ ಅವರು ಇಸ್ರೇಲ್‌ನ ಸೇನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಅವರು ಈಜಿಪ್ಟ್‌ನ ಅಧ್ಯಕ್ಷರಾಗುವುದನ್ನು ಇಸ್ರೇಲ್ ಎದುರು ನೋಡುತ್ತಿದೆ ಎಂದು ವಿಕಿಲೀಕ್ಸ್ ಬಹಿರಂಗಪಡಿಸಿದ ಅಮೆರಿಕದ ಗೋಪ್ಯ ರಾಜತಾಂತ್ರಿಕ ಸಂದೇಶಗಳಿಂದ ಗೊತ್ತಾಗಿದೆ.
ಇಸ್ರೇಲ್‌ನ ರಕ್ಷಣಾ ಸಚಿವಾಲಯದ ಸಲಹೆಗಾರ ಡೇವಿಡ್ ಹಚಂ ಅವರು  2008ರ ಸೆಪ್ಟೆಂಬರ್‌ನಲ್ಲಿ ತಿಳಿಸಿದ್ದ ಮಾಹಿತಿಯನ್ನು ಆಧರಿಸಿ ರಾಜತಾಂತ್ರಿಕರು ಅಮೆರಿಕಕ್ಕೆ ಈ ಸಂದೇಶ ರವಾನಿಸಿದ್ದರು. ವಿಕಿಲೀಕ್ಸ್ ಅದನ್ನು ಬಹಿರಂಗಪಡಿಸಿದೆ.
 
ಸುಲೇಮಾನ್ ಅವರು ಈಜಿಪ್ಟ್‌ನ ಅಧ್ಯಕ್ಷರಾಗುವುದನ್ನು ಇಸ್ರೇಲ್ ಎದುರು ನೋಡುತ್ತಿದೆ, ಎರಡೂ ದೇಶಗಳ ನಡುವೆ ಸ್ಥಾಪಿಸಲಾಗಿರುವ ‘ಹಾಟ್‌ಲೈನ್’ ದೂರವಾಣಿ ಸಂಪರ್ಕವನ್ನು ಪ್ರತಿ ದಿನ ಉಪಯೋಗಿಸಲಾಗುತ್ತಿದೆ ಎಂದು ಹೇಳಿದ್ದರು. ವಿಕಿಲೀಕ್ಸ್ ಇದೀಗ ಈ ಅಂಶವನ್ನು ಪತ್ತೆಹಚ್ಚಿ ‘ಟೆಲಿಗ್ರಾಫ್’ಗೆ ಅದನ್ನು ರವಾನಿಸಿದೆ.

 


 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.