ADVERTISEMENT

ಮುಬಾರಕ್ ಪದಚ್ಯುತಿ ಸನ್ನಿಹಿತ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 18:35 IST
Last Updated 4 ಫೆಬ್ರುವರಿ 2011, 18:35 IST

ವಾಷಿಂಗ್ಟನ್ (ಪಿಟಿಐ): ಈಜಿಪ್ಟ್ ಅಧ್ಯಕ್ಷ ಹೋಸ್ನಿ ಮುಬಾರಕ್ ಶೀಘ್ರದಲ್ಲೇ ಅಧಿಕಾರ ತ್ಯಜಿಸುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದ್ದು, ಅವರು ಅಧಿಕಾರವನ್ನು ಸೇನೆಯ ಬೆಂಬಲದೊಂದಿಗೆ ಹಂಗಾಮಿ ಸರ್ಕಾರದ ನೇತೃತ್ವ ವಹಿಸುವ ಉಪಾಧ್ಯಕ್ಷ ಒಮರ್ ಸುಲೈಮಾನ್ ಅವರಿಗೆ ಹಸ್ತಾಂತರಿಸಲಿದ್ದಾರೆ. ಆದರೆ, ಮುಬಾರಕ್ ಅವರು ಅಧಿಕಾರ ತ್ಯಜಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈಜಿಪ್ಟ್‌ನಲ್ಲಿ ಶಾಂತಿ ನೆಲೆಸಲು ಮಧ್ಯಸ್ಥಿಕೆ ವಹಿಸಿರುವ ಅಮೆರಿಕ ಅಲ್ಲಿನ ಪ್ರಮುಖ ಮುಖಂಡರೊಂದಿಗೆ ಮಾತುಕತೆ ನಡೆಸಿದ ಪರಿಣಾಮ ಮುಬಾರಕ್ ಅಧಿಕಾರ ತ್ಯಜಿಸುವ ನಿರ್ಣಯಕ್ಕೆ ಬಂದಿದ್ದಾರೆ ಎಂದು ಅಮೆರಿಕದ ಕೆಲವು ಅಧಿಕಾರಿಗಳ ಹೇಳಿಕೆಯನ್ನು ಉದಾಹರಿಸಿ ನ್ಯೂರ್ಯಾಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಹಂಗಾಮಿ ಸರ್ಕಾರದ ನೇತೃತ್ವವನ್ನು ಸೇನೆಯ ಬೆಂಬಲದೊಂದಿಗೆ ಉಪಾಧ್ಯಕ್ಷ ಸುಲೈಮಾನ್ ವಹಿಸಿಕೊಳ್ಳಬೇಕು ಮತ್ತು ಅವರು ಸಾಂವಿಧಾನಿಕವಾಗಿ ಸುಧಾರಣಾ ಕ್ರಮಗಳನ್ನು ಕೈಗೊಂಡು ಮುಂದಿನ ಸೆಪ್ಟೆಂಬರ್ ಹೊತ್ತಿಗೆ ದೇಶದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಬೇಕು ಎಂಬ ಪ್ರಸ್ತಾವವನ್ನು ಅಮೆರಿಕ ಮುಂದಿಟ್ಟಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಸದ್ಯ ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲಿ ಈಜಿಪ್ಟ್‌ನ ಸೇನಾ ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ಸಮಿ ಇನಾನ್ ಮತ್ತು ಫೀಲ್ಡ್ ಮಾರ್ಷಲ್ ಮಹಮದ್ ತಂತ್ವಾಯಿ ಅವರು ಹಂಗಾಮಿ ಸರ್ಕಾರದ ನೇತೃತ್ವ ವಹಿಸಿಕೊಳ್ಳುವ ಉಪಾಧ್ಯಕ್ಷ ಸುಲೈಮಾನ್ ಅವರ ಬೆಂಬಲಕ್ಕೆ ನಿಲ್ಲಬೇಕು. ಹಾಗೆಯೇ ರಕ್ಷಣಾ ಸಚಿವರು ಸಾಂವಿಧಾನಿಕವಾಗಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು. ಹಂಗಾಮಿ ಸರ್ಕಾರ ವಿರೋಧಿ ಗುಂಪುಗಳ ಮತ್ತು ನಿಷೇಧಕ್ಕೆ ಒಳಗಾಗಿರುವ ಮುಸ್ಲಿಂ ಬ್ರದರ್‌ಹುಡ್ ಸಂಘಟನೆಯ ಮುಖಂಡರೊಂದಿಗೆ  ಮುಕ್ತವಾಗಿ ಮಾತುಕತೆ ನಡೆಸಿ ನ್ಯಾಯಸಮ್ಮತವಾಗಿ ಚುನಾವಣೆ ನಡೆಸಬೇಕು ಎಂಬ ಪ್ರಸ್ತಾವವನ್ನು ಅಮೆರಿಕ ಮಂಡಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಟ್ಯುನೀಷಿಯದಲ್ಲಿ ಸರ್ಕಾರ ಪತನವಾದ ನಂತರ ಈಜಿಪ್ಟ್‌ನಲ್ಲಿ ಚಳವಳಿ ನಡೆಯುವ ಸಾಧ್ಯತೆ ಇದೆ ಎಂದು ಅಮೆರಿಕದ ಬೇಹುಗಾರಿಕಾ ಸಂಸ್ಥೆಯು ಶ್ವೇತ ಭವನಕ್ಕೆ ವರದಿ ಮಾಡಿತ್ತೆ ಎಂಬ ಅನುಮಾನವನ್ನು ನ್ಯೂಯಾರ್ಕ್ ಟೈಮ್ಸ್ ಎತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.