ADVERTISEMENT

ಮುಷರಫ್‌ ಹತ್ಯೆಗೆ ರೂ 200 ಕೋಟಿ ಸುಪಾರಿ!

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 19:30 IST
Last Updated 4 ಡಿಸೆಂಬರ್ 2013, 19:30 IST

ಇಸ್ಲಾಮಾಬಾದ್‌(ಪಿಟಿಐ): ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಅವರನ್ನು ಯಾರೇ ಕೊಂದರೂ ಅವರಿಗೆ ರೂ 200 ಕೋಟಿ ಮತ್ತು 200 ಎಕರೆ ಭೂಮಿ ನೀಡ­ಲಾಗುವುದು ಎಂದು ಘೋಷಿಸಲಾಗಿದೆ. ಇದು 2010 ರಲ್ಲಿ ಘೋಷಣೆ ಮಾಡಿದ ಬೆಲೆಗಿಂತ ದುಪ್ಪಟ್ಟಾಗಿದೆ.

ಮುಷರಫ್‌ ಆಡಳಿತಾವಧಿಯಲ್ಲಿ ಸೇನಾ ಕಾರ್ಯಾಚರಣೆ ವೇಳೆ ಮೃತರಾದ ಬಲೂಚಿಸ್ತಾನ್ ರಾಷ್ಟ್ರೀಯವಾದಿ ನಾಯಕ ಅಕ್ಬರ್‌ ಬುಗ್ತಿ ಅವರ ಮಗ ತಲಾಲ್‌ ಈ ಘೋಷಣೆ ಮಾಡಿದ್ದಾರೆ.

ತಲಾಲ್ 2010ರಲ್ಲಿ, ‘ಮುಷರಫ್‌ ಅವರನ್ನು ಹತ್ಯೆ ಮಾಡಿದರೆ ₨ 100 ಕೋಟಿ ಮತ್ತು 100 ಎಕರೆ ಭೂಮಿ ನೀಡುತ್ತೇನೆ’
ಎಂದು ಕ್ವೆಟ್ಟಾದಲ್ಲಿ ಹೇಳಿದ್ದರು.

ಪಾಕಿಸ್ತಾನ್ ಪೀಪಲ್ಸ್‌ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ ಜಾಮೂರಿ ವತನ್‌ ಪಕ್ಷದ (ಜೆಡಬ್ಲ್ಯೂಪಿ) ಮುಖ್ಯಸ್ಥ ತಲಾಲ್‌,  ‘ಮುಷರಪ್ ಕೃತ್ಯ ಮಾನವೀಯತೆ ವಿರುದ್ಧದ ಅಪರಾಧ’ ಎಂದು ಬಣ್ಣಿಸಿದ್ದಾರೆ.

ಅಕ್ಬರ್‌ ಬುಗ್ತಿ ಅವರ ಮೊಮ್ಮಗ, 2012ರಲ್ಲಿ ಮುಷರಫ್‌ ಹತ್ಯೆಗೆ ₨ 10.1 ಕೋಟಿ ಬೆಲೆ ಘೋಷಿಸಿದ್ದರು. ಬಲೂಚಿಸ್ತಾನದ ಕೊಹ್ಲು ಜಿಲ್ಲೆಯಲ್ಲಿ 2006ರಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಅಕ್ಬರ್‌ ಬುಗ್ತಿ ಮತ್ತು ಅವರ ಜೊತೆಗಾರರನ್ನು ಹತ್ಯೆ ಮಾಡಲಾಗಿತ್ತು.

ಮುಷರಫ್‌ ಸೇನಾ ಮುಖ್ಯಸ್ಥ ಮತ್ತು ಅಧ್ಯಕ್ಷರಾಗಿದ್ದಾಗ ಈ ಕಾರ್ಯಾಚರಣೆ ನಡೆಸುವಂತೆ ಆದೇಶಿಸಿದ್ದರು. ಬುಗ್ತಿ ಅವರ ಕೊಲೆ ಪ್ರಕರಣದಲ್ಲಿ ಮುಷರಫ್‌ ಆರೋಪಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಜಾಮೀನು ಪಡೆದಿದ್ದಾರೆ.

ಸಂವಿಧಾನವನ್ನು ನಾಶ ಮಾಡಿ ತುರ್ತು ಪರಿಸ್ಥಿತಿಯನ್ನು ಹೇರಿದ ಮುಷರಫ್‌ ಅವರನ್ನು 6ನೇ ಕಲಂ ಅನ್ವಯ ಬಂಧಿಸಲು ಯತ್ನಿಸು
ತ್ತಿರುವ ಪಾಕಿಸ್ತಾನ ಸರ್ಕಾರದ ನಿಲುವನ್ನು ತಲಾಲ್‌ ಪ್ರಶಂಸಿಸಿದ್ದಾರೆ. ಅಲ್ಲದೇ, ಪಾಕಿಸ್ತಾನ ಮುಸ್ಲಿಂ ಲೀಗ್‌ ಪಕ್ಷದ ಸರ್ಕಾರಕ್ಕೆ
ಜೆಡಬ್ಲ್ಯೂಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದೂ ಹೇಳಿದ್ದಾರೆ.

ಮುಷರಫ್‌ ತಮ್ಮ ಆಡಳಿತಾವಧಿಯಲ್ಲಿ ದೋಷಪೂರಿತ ನೀತಿಗಳ ಮೂಲಕ ಪಾಕಿಸ್ತಾನ ವನ್ನು ನಾಶ ಮಾಡಿದ್ದರು ಎಂದು ತಲಾಲ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.