ADVERTISEMENT

ಮುಷರಫ್ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ: ತ್ರಿಸದಸ್ಯ ಪೀಠ ರಚನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 11:13 IST
Last Updated 20 ಏಪ್ರಿಲ್ 2013, 11:13 IST

ಇಸ್ಲಾಮಾಬಾದ್ (ಪಿಟಿಐ): 2007ರಲ್ಲಿ ತುರ್ತುಪರಿಸ್ಥಿತಿ ಹೇರಿ, ಸಂವಿಧಾನವನ್ನು ಬುಡಮೇಲು ಮಾಡಿದ್ದಕ್ಕಾಗಿ ರಾಷ್ಟ್ರದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ವಿರುದ್ಧ  ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವ ಬಗ್ಗೆ ನಿರ್ದೇಶನ ಕೋರುವ ಅರ್ಜಿಗಳ ವಿಚಾರಣೆಗಾಗಿ ಪಾಕಿಸ್ತಾನಿ ಸುಪ್ರೀಂಕೋರ್ಟ್ ಶನಿವಾರ ತ್ರಿಸದಸ್ಯ ಪೀಠವೊಂದನ್ನು ರಚಿಸಿತು.

ನ್ಯಾಯಮೂರ್ತಿ ಜವ್ವಾದ್ ಎಸ್. ಖ್ವಾಜಾ ಅವರು ಮುಖ್ಯಸ್ಥರಾಗಿರುವ ಈ ಪೀಠವು ನ್ಯಾಯಮೂರ್ತಿ ಖಿಲ್ಜಿ ಅರಿಫ್ ಹುಸೇನ್, ನ್ಯಾಯಮೂರ್ತಿ ಏಜಾಜ್ ಅಫ್ಜಲ್ ಖಾನ್ ಅವರನ್ನು ಒಳಗೊಂಡಿರುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿಕೆ ತಿಳಿಸಿದೆ.

ಪೀಠವು ಸೋಮವಾರ ಈ ಸಂಬಂಧ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಲಿದೆ.

ಅರ್ಜಿಗಳ ಕುರಿತು ಆಲಿಸಲು ಮತ್ತು ನಿರ್ಧರಿಸಲು ಪೂರ್ಣ ಪೀಠ ಅಥವಾ ವಿಶಾಲಪೀಠವನ್ನು ರಚಿಸಬೇಕು ಎಂದು ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಅವರನ್ನು ಕೋರಿರುವ ಮುಷರಫ್ ಪರ ವಕೀಲರು ವಿಷಯಕ್ಕೆ ಸಂಬಂಧಿಸಿದ ಪ್ರಮುಖ ಆಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಅಪೇಕ್ಷಿಸಿದ್ದಾರೆ ಎಂದು ನ್ಯಾಯಾಲಯ ಹೇಳಿತು.

ಮುಷರಫ್ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕೇ ಎಂಬ ಸುಪ್ರೀಂಕೋರ್ಟ್ ಪ್ರಶ್ನೆಗೆ ಸರ್ಕಾರ ಇನ್ನೂ ಉತ್ತರ ನೀಡಿಲ್ಲ. ಸರ್ಕಾರ ಸೋಮವಾರ ಈ ಬಗ್ಗೆ ಉತ್ತರ ಸಲ್ಲಿಸುವ ಸಾಧ್ಯತೆಗಳಿವೆ ಎಂದು ವಾರ್ತಾ ಸಚಿವ ಅರಿಫ್ ನಿಝಾಮಿ ಹೇಳಿದರು.

ಉಸ್ತುವಾರಿ ಸರ್ಕಾರದ ಅಧಿಕಾರ ಸೀಮಿತ. ಆದ್ದರಿಂದ ಅದು ಮೇ 11ರ ಸಂಸದೀಯ ಚುನಾವಣೆಯ ಮೇಲೆ ಹೆಚ್ಚು ಗಮನ ನೀಡಬಯಸುತ್ತದೆ ಎಂದು ಅಟಾರ್ನಿ ಜನರಲ್ ಅವರು ಸುಪ್ರೀಂಕೋರ್ಟಿಗೆ ತಿಳಿಸಿದ್ದರು.

ಏನಿದ್ದರೂ ಉಸ್ತುವಾರಿ ಸರ್ಕಾರ ಪ್ರಕರಣವನ್ನು ದಾಖಲಿಸಬಹುದು ಎಂದು ನ್ಯಾಯಮೂರ್ತಿಗಳು ಹೇಳಿದ್ದರು.

ಮುಷರಫ್ ವಿರುದ್ಧ 2007ರಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನು ಬುಡಮೇಲು ಮಾಡಿದ್ದಕ್ಕಾಗಿ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಶುಕ್ರವಾರ ಸೆನೆಟ್ ನಿರ್ಣಯ ಅಂಗೀಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT