ADVERTISEMENT

ಮುಷರಫ್ ಸ್ಪರ್ಧೆಗೆ ಆಜೀವ ನಿಷೇಧ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2013, 19:59 IST
Last Updated 30 ಏಪ್ರಿಲ್ 2013, 19:59 IST

ಇಸ್ಲಾಮಾಬಾದ್ (ಪಿಟಿಐ): ರಾಜಕೀಯ ಮರುಜನ್ಮ ಪಡೆಯುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಆಸೆಗೆ ನ್ಯಾಯಾಲಯದಿಂದ ಬಲವಾದ ಪೆಟ್ಟು ಬಿದ್ದಿದೆ. ಮುಷರಫ್ ತಮ್ಮ ಜೀವಿತಾವಧಿಯಲ್ಲಿ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಿ ಪೆಶಾವರದ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ದೋಸ್ತ್ ಮುಹಮ್ಮದ್ ಖಾನ್ ಅವರ ನೇತೃತ್ವದ ನಾಲ್ವರು ನ್ಯಾಯಾಧೀಶರ ನ್ಯಾಯಪೀಠ ಈ ತೀರ್ಪು ನೀಡಿದೆ. ತಮ್ಮ ನಾಮಪತ್ರ ತಿರಸ್ಕೃರಿಸಿದ ಆದೇಶ ಪ್ರಶ್ನಿಸಿ ಮುಷರಫ್ ಸಲ್ಲಿಸಿದ್ದ ಅರ್ಜಿಯನ್ನೂ ಇದೇ ಸಂದರ್ಭದಲ್ಲಿ ನ್ಯಾಯಾಲಯ ವಜಾ ಮಾಡಿತು.

ಸಂವಿಧಾನದ ಆಶಯಗಳಿಗೆ ಎರಡು ಸಲ ಧಕ್ಕೆ ತಂದಿದ್ದು ಹಾಗೂ 2007ರ ತುರ್ತುಪರಿಸ್ಥಿತಿಯಲ್ಲಿ ನ್ಯಾಯಾಧೀಶರನ್ನು ಬಂಧಿಸಿದ್ದಕ್ಕೆ ಈ ನಿಷೇಧ ವಿಧಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿತು.

ಮೇ 11ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ನಡೆದ ಬಳಿಕ ಮೂರು ದಿನಗಳವರೆಗೆ ಮುಷರಫ್ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇಡಲು ಸಹ ನ್ಯಾಯಾಲಯ ಆದೇಶ ನೀಡಿತು.

ಇದೇ ವೇಳೆ ಮುಷರಫ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದರಿಂದಾಗಿ ಅವರು ಮತದಾನ ನಡೆಯುವ ದಿವಸ (ಮೇ 11) ಕೂಡ ಸೆರೆಯಲ್ಲಿ ಇರಬೇಕಾದ ಪರಿಸ್ಥಿತಿ ಬಂದೊದಗಿದೆ.

ಮಾಜಿ ಪ್ರಧಾನಿ ಬೆನಜಿರ್ ಭುಟ್ಟೊ ಹತ್ಯೆ ಪ್ರಕರಣದ ವಿಚಾರಣೆಯು ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಲ್ಲಿ ಮಂಗಳವಾರ ನಡೆಯಿತು. ಆದರೆ, ಸುರಕ್ಷತೆಯ ಕಾರಣ ಆರೋಪಿ ಮುಷರಫ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಮಾಡಿರಲಿಲ್ಲ. ಆದರೂ ನ್ಯಾಯಾಲಯ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಿತು. 

ಉಪಕಾರಾಗೃಹವೆಂದು ಘೋಷಿಸಲಾಗಿರುವ ಮುಷರಫ್ ಅವರ ತೋಟದ ಮನೆಯಲ್ಲೇ ಅವರು ನ್ಯಾಯಾಂಗ ಬಂಧನದ ಅವಧಿ ಕಳೆಯಬೇಕಾಗಿದೆ.

ಮುಷರಫ್ ಅವರಿಗೆ ಹೆಚ್ಚಿನ ಜೀವ ಬೆದರಿಕೆ ಇದೆಯೆಂದು ಆಂತರಿಕ ವ್ಯವಹಾರಗಳ ಸಚಿವಾಲಯ ತಿಳಿಸಿರುವ ಕಾರಣ ಅವರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಿಲ್ಲ ಎಂದು ಮುಖ್ಯ ಪ್ರಾಸಿಕ್ಯೂಟರ್ ಚೌಧರಿ ಜುಲ್ಫಿಕರ್ ಅಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತೆಹ್ರೀಕ್-ಎ-ತಾಲಿಬಾನ್ ಸಂಘಟನೆಯು ಮುಷರಫ್ ಅವರನ್ನು ಹತ್ಯೆ ಮಾಡಲು ವಿಶೇಷ ಆತ್ಮಾಹುತಿ ದಳವನ್ನು ಬಿಟ್ಟಿರುವುದಾಗಿ ಹೇಳಿಕೊಂಡಿದೆ. ಈ ಬೆದರಿಕೆಗೆ ಪೂರಕ ಎಂಬಂತೆ ಮುಷರಫ್ ಅವರ ತೋಟದ ಮನೆಯ ಸಮೀಪ ಹೆಚ್ಚಿನ ಪ್ರಮಾಣದಲ್ಲಿ ಸ್ಫೋಟಕಗಳನ್ನು ಇರಿಸಿದ್ದ ಕಾರೊಂದು ಇತ್ತೀಚೆಗೆ ಪತ್ತೆಯಾಗಿತ್ತು.

ನಾಲ್ಕು ವರ್ಷ ಹಿಂದೆ ಪಾಕ್‌ನಿಂದ ಸ್ವಯಂ ಗಡಿಪಾರಾಗಿದ್ದ ಮುಷರಫ್, ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಮುನ್ನಡೆಸುವ ಸಲುವಾಗಿ ಕಳೆದ ತಿಂಗಳು ಸ್ವದೇಶಕ್ಕೆ ವಾಪಸ್ ಬಂದಿದ್ದರು. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರಿರುವುದು ಹಾಗೂ ಬಂಧನದಿಂದಾಗಿ ಪುನಃ ರಾಷ್ಟ್ರದ ಚುಕ್ಕಾಣಿ ಹಿಡಿಯಬೇಕು ಎಂಬ ಅವರ ಹಂಬಲಕ್ಕೆ ಬಲವಾದ ಹೊಡೆತ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.