ADVERTISEMENT

ಮೂಲ ವಾತಾವರಣ ಬದಲಾವಣೆ

ಮಂಗಳ ಗ್ರಹದಿಂದ ಅನಿಲ ವಿಮೋಚನೆ- `ಕ್ಯೂರಿಯಾಸಿಟಿ' ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 19:59 IST
Last Updated 10 ಏಪ್ರಿಲ್ 2013, 19:59 IST

ವಾಷಿಂಗ್ಟನ್ (ಪಿಟಿಐ): ಮಂಗಳ ಗ್ರಹವು ತನ್ನ ಮೂಲ ವಾತಾವರಣದ ಬಹುಪಾಲನ್ನು ಕಳೆದುಕೊಂಡಿದೆ ಎಂಬುದು ನಾಸಾದ ಕ್ಯೂರಿಯಾಸಿಟಿ ರೋವರ್‌ನ ಅಂಕಿಅಂಶಗಳ ವಿಶ್ಲೇಷಣೆಯಿಂದ ದೃಢಪಟ್ಟಿದೆ.

ಆದರೆ, ಮೂಲ ವಾತಾವರಣದ ಬಹುತೇಕ ಭಾಗವನ್ನು ಆ ಗ್ರಹ ಕಳೆದುಕೊಂಡಿದ್ದರೂ ಉಳಿದ ಭಾಗ ಸಕ್ರಿಯವಾಗಿದೆ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.

ವಾತಾವರಣದ ಮೇಲ್ಮೈಯಿಂದ ಅನಿಲ ವಿಮೋಚನೆಗೊಳ್ಳುವ ಪ್ರಕ್ರಿಯೆಯ ಮೂಲಕ ಮಂಗಳಗ್ರಹದ ವಾತಾವರಣ ಬದಲಾಗಿದೆ ಎಂದು ನಾಸಾದ ಜೆಟ್ ಪ್ರೊಪಲ್‌ಷನ್ ಲ್ಯಾಬೊರೇಟರಿ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದೆ.

ಕ್ಯೂರಿಯಾಸಿಟಿಯು ಅಂಗಾರಕನ ವಾತಾವರಣದ ಆಯ್ದ ಅನಿಲಗಳ ಬಗ್ಗೆ ಕಳೆದ ವಾರ ಕಲೆಹಾಕಿದ ದತ್ತಾಂಶಗಳಿಂದ ಈ ವಿಶ್ಲೇಷಣೆ ನಡೆಸಲಾಯಿತು. ಕೆಂಪುಗ್ರಹದ ವಾತಾವರಣದಲ್ಲಿನ ಆರ್ಗನ್ ಅನಿಲದ ಸಮಸ್ಥಾನಿಗಳ (ಐಸೋಟೋಪ್‌ಗಳು) ಕುರಿತ ಅತ್ಯಂತ ನಿಖರ ಫಲಿತಾಂಶವನ್ನೂ ಇದು ನೀಡಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಮಂಗಳನ ಅಂಗಳದಲ್ಲಿ ಆರ್ಗನ್ ಅನಿಲದ ಹಗುರ ಸಮಸ್ಥಾನಿಗಳ ಸಂಖ್ಯೆ (ಆರ್ಗನ್- 36) ಅದೇ ಅನಿಲದ ಭಾರ ಸಮಸ್ಥಾನಿಗಳ ಸಂಖ್ಯೆಗಿಂತ (ಆರ್ಗನ್- 38) ನಾಲ್ಕು ಪಟ್ಟು ಅಧಿಕವಾಗಿದೆ ಎಂಬುದು ಕೂಡ ಕ್ಯೂರಿಯಾಸಿಟಿ ವಿಶ್ಲೇಷಣೆಯಿಂದ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.