ADVERTISEMENT

ಮೆಮೊಗೇಟ್ ಹಗರಣ: ಇಜಾಜ್‌ಗೆ ಬಂಧನ ಭೀತಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಮೆಮೊಗೇಟ್ ಹಗರಣದ ಕೇಂದ್ರ ಬಿಂದುವಾಗಿರುವ ಪಾಕ್ ಮೂಲದ ಅಮೆರಿಕದ ಉದ್ಯಮಿ ಮನ್ಸೂರ್ ಇಜಾಜ್, ತಮ್ಮನ್ನು ಬಂಧಿಸಬಹುದು ಎಂಬ ಭೀತಿಯಿಂದ ಈ ಹಗರಣದ ವಿಚಾರಣೆಗೆ ಪಾಕ್‌ಗೆ ಆಗಮಿಸುವುದಕ್ಕೆ ಹಿಂಜರಿಯುತ್ತಿದ್ದಾರೆ. ವಿಚಾರಣೆಯನ್ನು ಲಂಡನ್ ಇಲ್ಲವೆ ಜ್ಯೂರಿಚ್‌ನಲ್ಲಿ ನಡೆಸುವುದಿದ್ದರೆ ಹಾಜರಾಗಲು ಸಿದ್ಧ ಎಂದು ಹೇಳಿದ್ದಾರೆ.

`ತಮ್ಮ ಭದ್ರತೆ ಬಗ್ಗೆ ಪಾಕ್ ಸರ್ಕಾರದ ಪರವಾಗಿ ಯಾರೂ ಭರವಸೆ ನೀಡಿಲ್ಲ. ಆದ್ದರಿಂದ ಪಾಕ್‌ನಲ್ಲಿ ವಿಚಾರಣೆಗೆ ಎದುರಾಗಲಾರೆ~ ಎಂದು ಇಜಾಜ್ ತಮ್ಮ ವಕೀಲರ ಮೂಲಕ ಸೋಮವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಒಸಾಮ ಬಿನ್ ಹತ್ಯೆ ತರುವಾಯ ಪಾಕ್‌ನಲ್ಲಿ ಸೇನಾ ಕ್ರಾಂತಿ ಆಗಬಹುದು ಎಂದು ಆತಂಕಗೊಂಡಿದ್ದ ಸರ್ಕಾರ, ಇಂತಹ ಸಂದರ್ಭ ಬಂದರೆ ನೆರವು ನೀಡುವಂತೆ ಅಮೆರಿಕವನ್ನು ಕೋರಿತ್ತು ಎನ್ನಲಾದ ರಹಸ್ಯ ಪತ್ರವೇ ಈ `ಮೆಮೊಗೇಟ್~ ಹಗರಣ. ಇದರ ವಿವರವು ಮನ್ಸೂರ್ ಇಜಾಜ್ ಅವರಿಂದ ಬಯಲಾಯಿತು.

ಈ ಹಗರಣದ ಸುಳಿಯಲ್ಲಿ ಪಾಕ್‌ನ ರಾಷ್ಟ್ರಪತಿ ಆಸಿಫ್ ಅಲಿ ಜರ್ದಾರಿ, ಅಮೆರಿಕದಲ್ಲಿದ್ದ ಪಾಕ್‌ನ ಮಾಜಿ ರಾಯಭಾರಿ ಹುಸೇನ್ ಹಖಾನಿ ಸೇರಿದಂತೆ ಅನೇಕ ಗಣ್ಯರು ಸಿಲುಕಿಕೊಂಡಿದ್ದು, ಸುಪ್ರೀಂಕೋರ್ಟ್ ಈ ಬಗ್ಗೆ ತನಿಖೆ ನಡೆಸಲು ಆಯೋಗವೊಂದನ್ನು ರಚಿಸಿದೆ.

ಈ ಆಯೋಗವು ಜ. 16ರಂದು ವಿಚಾರಣೆಗೆ ಹಾಜರಾಗುವಂತೆ ಇಜಾಜ್‌ಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ಇಜಾಜ್ ಆಗಮಿಸದ ಕಾರಣ ಮಂಗಳವಾರ (ಜ. 24) ಹಾಜರಾಗುವಂತೆ ಆಯೋಗವು ಮತ್ತೆ ಸಮನ್ಸ್ ಜಾರಿ ಮಾಡಿದೆ.  ಆದರೆ, ಇಜಾಜ್ ಅವರು ಈಗ ನೀಡಿರುವ ಹೇಳಿಕೆಯನ್ನು ಗಮನಿಸಿದರೆ ಮಂಗಳವಾರ ವಿಚಾರಣೆಗೆ ಹಾಜರಾಗುವುದು ಅನುಮಾನ ಎನ್ನಲಾಗಿದೆ.

ಈ ಮಧ್ಯೆ, ಇದೇ ಹಗರಣ ಕುರಿತಂತೆ ತನಿಖೆ ನಡೆಸುತ್ತಿರುವ  ಪಾಕ್ ಸಂಸತ್‌ನ ರಾಷ್ಟ್ರೀಯ ಭದ್ರತಾ ಸಮಿತಿ ಕೂಡ ಇಜಾಜ್‌ಗೆ ಜ. 26ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಪಾಕ್‌ಗೆ ಆಗಮಿಸಿದರೆ ತಮ್ಮನ್ನು ಬಂಧಿಸಬಹುದೆಂದು ಅವರು ದಿಗಿಲುಗೊಂಡಿದ್ದಾರೆ ಎಂದು ಇಜಾಜ್ ಪರ ವಕೀಲರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೊಮೆಗೇಟ್ ಹಗರಣ ಕುರಿತು ತನಿಖೆ ನಡೆಸುತ್ತಿರುವ ಸುಪ್ರೀಂಕೋರ್ಟ್ ರಚಿಸಿದ ಆಯೋಗದ ಮುಂದೆ ಮನ್ಸೂರ್ ಇಜಾಜ್ ಮಂಗಳವಾರ (ಜ. 24) ವಿಚಾರಣೆಗೆ ಹಾಜರಾಗದಿದ್ದರೆ ಆತನಿಗೆ ಮತ್ತೆ ಅವಕಾಶ ನೀಡಬಾರದು ಎಂದು ಅಮೆರಿಕದಲ್ಲಿ ಪಾಕ್‌ನ ರಾಯಭಾರಿ ಆಗಿದ್ದ ಹುಸೇನ್ ಹಖಾನಿ ಹೇಳಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.