ADVERTISEMENT

ಮೆಮೊಗೇಟ್ ಹಗರಣ ; ಸಂಸತ್- ನ್ಯಾಯಾಂಗ ಸಂಘರ್ಷಕ್ಕೆ ನಾಂದಿ?

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಸೇನೆ ಕ್ಷಿಪ್ರ ಕ್ರಾಂತಿ ನಡೆಸಿದರೆ ನೆರವಿನ ಹಸ್ತ ನೀಡಬೇಕು ಎಂದು ಕೋರಿ ಅಮೆರಿಕಕ್ಕೆ ಕಳುಹಿಸಲಾಗಿತ್ತು ಎನ್ನಲಾದ `ಮೆಮೊಗೇಟ್ ಟಿಪ್ಪಣಿ~ಯ ಸತ್ಯಾಸತ್ಯತೆ ಬಗ್ಗೆ ಸಂಸತ್ತಿನ ಸಮಿತಿ ನೀಡುವ ತೀರ್ಮಾನವನ್ನು ತಮ್ಮ ಸರ್ಕಾರ ಒಪ್ಪಿಕೊಳ್ಳಲಿದೆ ಎಂದು ರಾಷ್ಟ್ರಾಧ್ಯಕ್ಷ ಅಸಿಫ್ ಅಲಿ ಜರ್ದಾರಿ ಹೇಳಿದ್ದು, ಇದು ಸಂಸತ್ ಹಾಗೂ ನ್ಯಾಯಾಂಗದ ನಡುವಿನ ಸಂಘರ್ಷಕ್ಕೆ ಕಾರಣವಾಗುವ ಸಂಭವವಿದೆ.

ಸುಪ್ರೀಂಕೋರ್ಟ್ ಈಗಾಗಲೇ ಮೆಮೊಗೇಟ್ ವಿವಾದದ ಬಗ್ಗೆ ನ್ಯಾಯಾಂಗ ಆಯೋಗದ ಮೂಲಕ ತನಿಖೆ ನಡೆಸುತ್ತಿದ್ದು, ಅಧ್ಯಕ್ಷ ಜರ್ದಾರಿ ಸಂಸತ್ ಸಮಿತಿಯ ವರದಿಯನ್ನು ಒಪ್ಪಿಕೊಳ್ಳುವ ಮಾತನಾಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮೆಮೊಗೇಟ್ ವಿವಾದ ಆರಂಭವಾದ ನಂತರ ಪ್ರಥಮ ಬಾರಿಗೆ ಈ ಬಗ್ಗೆ ಬಹಿರಂಗವಾಗಿ ಮಾತನಾಡಿರುವ ಜರ್ದಾರಿ, ಸುಪ್ರೀಂಕೋರ್ಟ್ ಮತ್ತು ಸಂಸತ್ ಸಮಿತಿ ಎರಡೂ ತನಿಖೆ ನಡೆಸುತ್ತಿದ್ದು, ಇವೆರಡರಲ್ಲಿ ಸಂಸತ್ತೇ ಪರಮಾಧಿಕಾರದ ವ್ಯವಸ್ಥೆಯಾದ್ದರಿಂದ ಆ ಸಮಿತಿಯ ವರದಿಯನ್ನೇ ತಾವು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ.

ಮೆಮೊಗೇಟ್‌ನಂತಹ ವಿವಾದದ ತನಿಖೆ ನಡೆಸಲು ಸುಪ್ರೀಂಕೋರ್ಟ್ ಸರಿಯಾದ ಸಂಸ್ಥೆ ಎಂದು ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌದರಿ ಕೆಲ ದಿನಗಳ ಹಿಂದೆ ಹೇಳಿದ್ದರು.

ಪಾಕಿಸ್ತಾನ ಮೂಲದ ಅಮೆರಿಕದ ಉದ್ಯಮಿ ಮನ್ಸೂರ್ ಇಜಾಜ್ ಹೇಳಿಕೆಗೆ ಅನಗತ್ಯ ಪ್ರಚಾರ ನೀಡಿದಂತಾಗುತ್ತದೆ ಎಂಬ ಕಾರಣಕ್ಕೆ ತಾವು ಇದುವರೆಗೆ ಸುಪ್ರೀಂಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸಿಲ್ಲ ಎಂದು ಜರ್ದಾರಿ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
 

ಹಖಾನಿ ಬೆಂಬಲಕ್ಕೆ ನಿಂತ ಅಮೆರಿಕ
ವಾಷಿಂಗ್ಟನ್ (ಪಿಟಿಐ): ಮೆಮೊಗೇಟ್ ಹಗರಣದ ತನಿಖೆ ನಡೆಸುತ್ತಿರುವ ನ್ಯಾಯಾಂಗ ಆಯೋಗವು ಮಾಜಿ ರಾಯಭಾರಿ ಹುಸೇನ್ ಹಖಾನಿ ಅವರನ್ನು ನ್ಯಾಯೋಚಿತವಾಗಿ ನಡೆಸಿಕೊಳ್ಳಬೇಕು ಎಂದು ಅಮೆರಿಕ ಕೋರಿದೆ.

ಹಖಾನಿ ವಿಚಾರಣೆಯು ತ್ವರಿತ, ಪಾರದರ್ಶಕವಾಗಿ ನಡೆದು ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯಬೇಕು ಎಂಬುದು ನಮ್ಮ ನಿರೀಕ್ಷೆ ಎಂದು ವಿದೇಶಾಂಗ ಇಲಾಖೆ ವಕ್ತಾರೆ ವಿಕ್ಟೋರಿಯಾ ನುಲ್ಯಾಂಡ್ ತಿಳಿಸಿದ್ದಾರೆ.
ತಮ್ಮನ್ನು ಸಮರ್ಥಿಸಿಕೊಳ್ಳಲು ಹಖಾನಿಗೆ ಸಂಪೂರ್ಣ ಅವಕಾಶ ನೀಡಬೇಕು. ಪಾಕಿಸ್ತಾನದ ಕಾನೂನಿನ ಪ್ರಕಾರ ಮತ್ತು ಅಂತರರಾಷ್ಟ್ರೀಯ ನ್ಯಾಯಿಕ ಮಾನದಂಡದ ಅನುಸಾರ ವಿಚಾರಣೆ ನಡೆಯಬೇಕು. ಅಮೆರಿಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ ಎಂದು ನುಲ್ಯಾಂಡ್ ತಿಳಿಸಿದ್ದಾರೆ.

ಹಖಾನಿ ವಿಚಾರದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಲು ನುಲ್ಯಾಂಡ್ ಮೊದಲು ನಿರಾಕರಿಸಿದ್ದರು. ಈಗ ತಾವು ಅಧಿಕೃತವಾಗಿ ಪಾಕಿಸ್ತಾನ ಸರ್ಕಾರಕ್ಕೆ ಅಮೆರಿಕದ ನಿಲುವನ್ನು ಸ್ಪಷ್ಟಪಡಿಸಿರುವುದಾಗಿ ಹೇಳಿದ್ದಾರೆ.

ಹಖಾನಿ ಅವರ ಪತ್ನಿ ಅಮೆರಿಕದ ಅನೇಕ ಸೆನೆಟ್ ಸದಸ್ಯರನ್ನು ಭೇಟಿ ಮಾಡುವ ಜತೆಗೆ ವಿದೇಶಾಂಗ ಇಲಾಖೆಯ ಅಧಿಕಾರಗಳ ಜತೆ ಸತತ ಸಂಪರ್ಕದಲ್ಲಿ ಇದ್ದಾರೆ ಎಂದೂ ಅಧಿಕೃತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT