ಲಂಡನ್ (ಪಿಟಿಐ): ಜಗತ್ತಿನಲ್ಲಿ ಇದೇ ಮೊತ್ತಮೊದಲ ಬಾರಿಗೆ ಅತ್ಯಂತ ಸ್ಫುಟವಾದ `ತ್ರೀ- ಡಿ' ಡಿಜಿಟಲ್ ಸ್ವರೂಪದ ಮನುಷ್ಯನ ಮಿದುಳಿನ ಮಾದರಿಯೊಂದನ್ನು ವಿಜ್ಞಾನಿಗಳು ಸೃಷ್ಟಿಸಿದಾರೆ. `ಬಿಗ್ ಬ್ರೈನ್' ಹೆಸರಿನ ಈ ಮಿದುಳನ್ನು ಜರ್ಮನಿ ಮತ್ತು ಕೆನಡಾದ ಸಂಶೋಧಕರು ಅಭಿವೃದ್ಧಿಪಡಿಸಿದ್ದು, ಮನುಷ್ಯನ ಅಂಗರಚನೆಯ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಇದರ ಮೂಲಕ ಕಾಣಬಹುದು ಎಂದು ತಜ್ಞರು ಹೇಳಿದ್ದಾರೆ.
65 ವರ್ಷದ ಮೃತ ಮಹಿಳೆಯೊಬ್ಬರ ಮಿದುಳನ್ನು ವಿಜ್ಞಾನಿಗಳು 7,400 ಭಾಗಗಳನ್ನಾಗಿ ವಿಂಗಡಿಸಿ ರೂಪಿಸಿರುವ ಈ ಮಿದುಳಿನ ಒಂದೊಂದು ಎಳೆಯೂ ಮನುಷ್ಯನ ಕೂದಲಿನಷ್ಟು ಸಣ್ಣದಾಗಿವೆ. ಹೀಗೆ ಕಲೆಹಾಕಲಾದ ಎಳೆಗಳನ್ನು ಕಂಪ್ಯೂಟರ್‌ನಲ್ಲಿ ಅತ್ಯಂತ ಸ್ಫುಟವಾಗಿ ಸ್ಕ್ಯಾನ್ ಮಾಡಿ ಅದರ ರಚನೆಯ ಅಂಶಗಳನ್ನು ದಾಖಲಿಸಲಾಗಿದೆ.
`ಒಟ್ಟು 8000 ಕೋಟಿ ನರಕೋಶಗಳನ್ನು ಕಂಪ್ಯೂಟರ್‌ನಲ್ಲಿ ಸ್ಕ್ಯಾನ್ ರೂಪಿಸಲಾಗಿರುವ ಈ `ತ್ರೀ ಡಿ' ಮಿದುಳಿನ ರಚನೆಗೆ ಹತ್ತು ವರ್ಷ ತಗುಲಿದೆ. `ಗೂಗಲ್ ಅರ್ಥ್'ನಂತಿರುವ ಈ ಮಿದುಳು ಪ್ರತಿ ಮಾಹಿತಿಯನ್ನು ಕಣ್ಣಿಗೆ ಕಟ್ಟಿಕೊಡಬಲ್ಲದು' ಎಂದು ಜರ್ಮನಿಯ ಜುಲಿಚ್ ಸಂಶೋಧನಾ ಕೇಂದ್ರದ ಪ್ರೊಪೆಸರ್ ಮತ್ತು ಸಂಶೋಧಕ ಕ್ಯಾಥರಿನ್ ಅಮುಂಟ್ಸ್ ಹೇಳಿದ್ದಾರೆ.
ಮಿದುಳು ಸಂಬಂಧಿ ಸಂಶೋಧನೆಗಳಲ್ಲೇ ಅತ್ಯಂತ ಪ್ರಮುಖವಾಗಿರುವ `ತ್ರೀ-ಡಿ' ಡಿಜಿಟಲ್ ಮಿದುಳು ಸೃಷ್ಟಿಯು ನರವಿಜ್ಞಾನಿಗಳಿಗೆ ಸಂಶೋಧನೆಯಲ್ಲಿ ನೆರವಾಗಬಲ್ಲದು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.