ADVERTISEMENT

ಯರೇನಿಯಂ: ವಿಕಿಲೀಕ್ಸ್ ಬಹಿರಂಗ ಭಾರತಕ್ಕೆ ತೆರೆಮರೆಯಲ್ಲಿ ಪೂರೈಕೆ:ಆಸ್ಟ್ರೇಲಿಯಾ ಸಿದ್ಧ.

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 18:30 IST
Last Updated 9 ಫೆಬ್ರುವರಿ 2011, 18:30 IST

ಮೆಲ್ಬರ್ನ್ (ಪಿಟಿಐ):  ಅಣ್ವಸ್ತ್ರ ನಿಶ್ಯಸ್ತ್ರೀಕರಣ ಒಪ್ಪಂದಕ್ಕೆ ಭಾರತ ಸಹಿ ಹಾಕದಿದ್ದರೆ ತಾನು ಯುರೇನಿಯಂ ಪೂರೈಕೆ ಮಾಡುವುದಿಲ್ಲ ಎಂದು ಆಸ್ಟ್ರೇಲಿಯಾ ಸರ್ಕಾರ ಬಹಿರಂಗವಾಗಿ ಹೇಳುತ್ತಿದ್ದರೂ ಸಹ, ರಹಸ್ಯವಾಗಿ ಭಾರತಕ್ಕೆ ಯುರೇನಿಯಂ ಪೂರೈಕೆ ಮಾಡಲು ಸಿದ್ಧವಿದೆ ಎನ್ನುವ ಅಂಶವನ್ನು ವಿಕಿಲೀಕ್ಸ್ ಬಹಿರಂಗಗೊಳಿಸಿದ ರಹಸ್ಯ ದಾಖಲೆಗಳು ಆಸ್ಟ್ರೇಲಿಯಾದ  ಇಂಧನ ಸಚಿವ ಮಾರ್ಟಿನ್ ಫರ್ಗುಸನ್ ಕ್ಯಾನ್‌ಬೆರಾದಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ಮಾಹಿತಿ ನೀಡಿ, ಭಾರತಕ್ಕೆ ಯುರೇನಿಯಂ ಪೂರೈಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಇನ್ನು 3ರಿಂದ 5 ವರ್ಷಗಳಲ್ಲಿ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ ಎಂದಿದ್ದರು.

ವಿದೇಶಾಂಗ ವ್ಯವಹಾರಗಳ ಸಚಿವ ಕೆವಿನ್ ರುಡ್ ಅವರು ಅತ್ಯಂತ ಜಾಗ್ರತೆಯಿಂದ ಇಂತಹ ಒಪ್ಪಂದಕ್ಕೆ ಅವಕಾಶ ಕಲ್ಪಿಸಲು ಮುಂದಾಗಿದ್ದಾರೆ ಎಂದೂ ಫರ್ಗುಸನ್ ಹೇಳಿದ್ದಾರೆ ಎಂದು ವಿಕಿಲೀಕ್ಸ್‌ನ ದಾಖಲೆಗಳನ್ನು ಆಧರಿಸಿ ‘ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ವರದಿ ಮಾಡಿದೆ.2009ರಲ್ಲಿ ಫರ್ಗುಸನ್ ಅವರು ಈ ಸೂಕ್ಷ್ಮ ಮಾಹಿತಿ ನೀಡಿದ್ದಾರೆ ಎಂದು ಆಗ ಆಸ್ಟ್ರೇಲಿಯಾದಲ್ಲಿ ಅಮೆರಿಕ ರಾಯಭಾರಿಯಾಗಿದ್ದ ಜೆಫ್ರಿ ಬ್ಲೀಚ್ ತಮ್ಮ ದೇಶಕ್ಕೆ ವರದಿ ನೀಡಿದ್ದರು.ಅಮೆರಿಕ ರಾಯಭಾರಿ ಬ್ಲೀಚ್ ಮತ್ತು ಅಮೆರಿಕ ನಿಯೋಗದ ಉಪ ಮುಖ್ಯಸ್ಥ ಡಾನ್ ಕ್ಲೂನ್ ಅವರೊಂದಿಗೆ 2009ರ ನವೆಂಬರ್ 27ರಂದು ಫರ್ಗುಸನ್ ಅವರು ನಡೆಸಿದ ಮಾತುಕತೆ ಸಂದರ್ಭದಲ್ಲಿ ಈ ಮಾಹಿತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.