ವಾಷಿಂಗ್ಟನ್(ಪಿಟಿಐ): ಪಾಕ್ ಮೂಲದ ಅಮೆರಿಕನ್ ಮುಸ್ಲಿಂ ಯೋಧನ ಕುಟುಂಬದ ವಿರುದ್ಧ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಟೀಕೆ ಮಾಡಿರುವುದು ವಿವಾದ ಸೃಷ್ಟಿಸಿದೆ. ‘ಡೊನಾಲ್ಡ್ ಅವರು ‘ದೊಡ್ಡ ತಪ್ಪು’ ಮಾಡಿದ್ದಾರೆ’ ಎಂದು ರಿಪಬ್ಲಿಕನ್ ಪಕ್ಷದ ಮುಖಂಡರೇ ಬಹಿರಂಗವಾಗಿ ಹೇಳುತ್ತಿದ್ದಾರೆ.
ಅಮೆರಿಕ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ, ಪಾಕಿಸ್ತಾನ ಮೂಲದ ಯೋಧ ಹುಮಾಯೂನ್ ಖಾನ್ 2004ರಲ್ಲಿ ಇರಾಕ್‌ನಲ್ಲಿ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ್ದ.
ಈ ಯೋಧನ ಕುಟುಂಬದ ಬಗ್ಗೆ ಟೀಕೆ ಮಾಡಿದ ಟ್ರಂಪ್, ‘ಪಾಕ್ ಮೂಲದ ಈ ಕುಟುಂಬ ದೇಶಕ್ಕೆ ಯಾವುದೇ ಕಾಣಿಕೆ ಕೊಟ್ಟಿಲ್ಲ. ಆದರೆ ನಾನು ದೇಶದ ಅಭಿವೃದ್ಧಿಗೆ ಬೇಕಾದಷ್ಟು ಕಾಣಿಕೆ ಕೊಟ್ಟಿದ್ದೇನೆ. ಸಾವಿರಾರು ಕಟ್ಟಡಗಳನ್ನು ನಿರ್ಮಿಸಿದ್ದೇನೆ, ಉದ್ಯೋಗ ಸೃಷ್ಟಿಸಿದ್ದೇನೆ’ ಎಂದು ಹೇಳಿದ್ದರು. ಟ್ರಂಪ್ ಹೇಳಿಕೆಗೆ ವಿವಿಧ ಕ್ಷೇತ್ರಗಳಿಂದ ವಿರೋಧ ವ್ಯಕ್ತವಾಗಿದೆ.
‘ಜನರ ಧರ್ಮವನ್ನು ಆಧಾರವಾಗಿಟ್ಟು, ಅಮೆರಿಕಕ್ಕೆ ಪ್ರವೇಶ ನೀಡುವುದು ಸರಿಯಲ್ಲ. ಧಾರ್ಮಿಕ ಪರೀಕ್ಷೆ ದೇಶದ ಮೂಲಭೂತ ಮೌಲ್ಯಗಳಲ್ಲಿ ಪ್ರತಿಬಿಂಬಿಸುವುದಿಲ್ಲ’ ಎಂದು ಸ್ಪೀಕರ್ ಪೌಲ್ ರಾಯನ್ ಹೇಳಿದ್ದಾರೆ.
‘ಟ್ರಂಪ್ ತಮ್ಮ ಹೇಳಿಕೆ ಮೂಲಕ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕುಟುಂಬವನ್ನು ಅವಮಾನಿಸಿದ್ದಾರೆ’ ಎಂದು ಫ್ಲಾರಿಡಾ ಗವರ್ನರ್ ಜೆಬ್ ಬುಷ್ ಪ್ರತಿಕ್ರಿಯಿಸಿದ್ದಾರೆ.‘ಹಲವು ಮುಸ್ಲಿಂ ಅಮೆರಿಕನ್ ಯೋಧರು ನಮ್ಮ ಸೇನೆಯಲ್ಲಿ ಶೌರ್ಯದಿಂದ ಸೇವೆ ಸಲ್ಲಿಸಿ ತ್ಯಾಗ ಮಾಡಿದ್ದಾರೆ. ಇವರಲ್ಲಿ ಕ್ಯಾಪ್ಟನ್ ಖಾನ್ ಒಬ್ಬರು. ಅವರ ಬಲಿದಾನ ಮತ್ತು ಖೈಜರ್ ಮತ್ತು ಅವರ ತಂದೆ ಗಝಲಾ ಖಾನ್ ಅವರನ್ನು ಗೌರವಿಸಬೇಕು’ ಎಂದು ಹೇಳಿದ್ದಾರೆ.
ಕ್ಷಮೆಯಾಚಿಸಲು ಆಗ್ರಹ: ಯೋಧನ ವಿರುದ್ಧ ಟೀಕೆ ಮಾಡಿ ‘ಅಮೆರಿಕ ವಿರೋಧಿ’ ಧೋರಣೆ ವ್ಯಕ್ತಪಡಿಸಿರುವ ಡೊನಾಲ್ಡ್ ಟ್ರಂಪ್ ವಿರುದ್ಧ ಯೋಧನ ಕುಟುಂಬ ಆಕ್ರೋಶವ್ಯಕ್ತಪಡಿಸಿದೆ. ಟ್ರಂಪ್ ಇದಕ್ಕಾಗಿ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.