ADVERTISEMENT

ರಬ್ಬಾನಿ ಹತ್ಯೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಕಾಬೂಲ್ (ಎಎಫ್‌ಪಿ): ಆಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಸರ್ಕಾರದ ಶಾಂತಿ ಮಂಡಲಿ ಅಧ್ಯಕ್ಷ ಬುರ‌್ಹಾನುದ್ದೀನ್ ರಬ್ಬಾನಿ ಅವರ ಹತ್ಯೆ ಖಂಡಿಸಿ ಬುಧವಾರ ನೂರಾರು ಜನರು ಪ್ರತಿಭಟನೆ ನಡೆಸಿದರು.

ರಬ್ಬಾನಿ ಅವರ ಭಾವಚಿತ್ರಗಳನ್ನು ಹಿಡಿದಿದ್ದ, ತಲೆಗೆ ಕಪ್ಪುಪಟ್ಟಿ ಕಟ್ಟಿದ್ದ ಜನರು ಬುಧವಾರ ಮಾಜಿ ಅಧ್ಯಕ್ಷರ ನಿವಾಸದ ಸಮೀಪ ಸೇರಿ ಶ್ರದ್ಧಾಂಜಲಿ ಸಲ್ಲಿಸಿದರಲ್ಲದೇ ಹತ್ಯೆಯನ್ನು ತೀವ್ರವಾಗಿ ಖಂಡಿಸಿದರು ಎಂದು ಎಎಫ್‌ಪಿ ಸುದ್ದಿ ಸಂಸ್ಥೆಯ ಛಾಯಾಗ್ರಾಹಕರೊಬ್ಬರು ಹೇಳಿದ್ದಾರೆ.

ಆಫ್ಘಾನಿಸ್ತಾನದಲ್ಲಿ 1992-96ರ ಅವಧಿಯಲ್ಲಿ ನಡೆದಿದ್ದ ರಕ್ತಸಿಕ್ತ ನಾಗರಿಕ ಯುದ್ಧದ ಸಂದರ್ಭದಲ್ಲಿ ದೇಶದ ಅಧ್ಯಕ್ಷರಾಗಿದ್ದ 71 ವಯಸ್ಸಿನ ರಬ್ಬಾನಿ ಅವರು ಮಂಗಳವಾರ ಸಂಜೆ ತಾಲಿಬಾನ್ ಆತ್ಮಾಹುತಿ ಬಾಂಬರ್ ಒಬ್ಬ ನಡೆಸಿದ ದಾಳಿಯಲ್ಲಿ ಹತ್ಯೆಗೀಡಾಗಿದ್ದರು.

ತಲೆಗೆ ಸುತ್ತಿಕೊಂಡಿದ್ದ ರುಮಾಲಿನಲ್ಲಿ ಸ್ಫೋಟಕ ಇರಿಸಿಕೊಂಡು ರಬ್ಬಾನಿ ನಿವಾಸಕ್ಕೆ ಬಂದಿದ್ದ ಆತ್ಮಾಹುತಿ ಬಾಂಬರ್ ಸ್ವಯಂ ಆಗಿ ಸ್ಫೋಟಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಹತ್ಯೆ ಬಗ್ಗೆ ತಾಲಿಬಾನ್ ಇದುವರೆಗೆ ಅಧಿಕೃತ ಹೇಳಿಕೆ ನೀಡಿಲ್ಲ.

ರಬ್ಬಾನಿ ಹತ್ಯೆಯ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಸದಸ್ಯರ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ನ್ಯೂಯಾರ್ಕ್‌ಗೆ ತೆರಳಿದ್ದ ಆಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜೈ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಭೇಟಿಯಾದ ಬಳಿಕ ಪ್ರವಾಸ ಮೊಟಕುಗೊಳಿಸಿ ಸ್ವದೇಶಕ್ಕೆ ಹಿಂದಿರುಗಿದ್ದಾರೆ.

ಅಮೆರಿಕ ನೇತೃತ್ವದ ಮೈತ್ರಿ ಸೇನಾಪಡೆ 2001ರಲ್ಲಿ ಭಯೋತ್ಪಾದಕರ ವಿರುದ್ಧ ಯುದ್ಧ ಆರಂಭಿಸಿದ ಮೇಲೆ, ಉಗ್ರರು ಪ್ರಮುಖ ರಾಜಕೀಯ ನಾಯಕರೊಬ್ಬರನ್ನು ಹತ್ಯೆ ಮಾಡಿದ ಎರಡನೇ ಪ್ರಕರಣ ಇದಾಗಿದೆ ಎಂದು ಹೇಳಲಾಗುತ್ತಿದೆ. ಎರಡು ತಿಂಗಳ ಹಿಂದೆ ಅಧ್ಯಕ್ಷ  ಕರ್ಜೈ ಅವರ ಕಿರಿಯ ಸಹೋದರನನ್ನು ಉಗ್ರರು ಹತ್ಯೆ ಮಾಡಿದ್ದರು.

ರಬ್ಬಾನಿ ಅವರ ನಿವಾಸ ಅಮೆರಿಕದ ರಾಯಭಾರಿ ಸಮೀಪವೇ ಇದ್ದು, ಬಿಗಿ ಭದ್ರತೆಯ ಹೊರತಾಗಿಯೂ ಪ್ರಮುಖ ರಾಜಕೀಯ ನಾಯಕನ ಹತ್ಯೆ ನಡೆದಿರುವುದು ಆಫ್ಘಾನಿಸ್ತಾನದಲ್ಲಿರುವ ಭದ್ರತಾ ಪರಿಸ್ಥಿತಿಯನ್ನು ಪ್ರಶ್ನಿಸುವಂತೆ ಮಾಡಿದೆ.

ಕರ್ಜೈ ಸರ್ಕಾರ ರಚಿಸಿದ್ದ ಉನ್ನತ ಶಾಂತಿ ಮಂಡಲಿಯ ಮುಖ್ಯಸ್ಥರಾಗಿ ಹನ್ನೊಂದು ತಿಂಗಳಿನಿಂದ ಕಾರ್ಯನಿರ್ವಹಿಸುವ ಮೂಲಕ ತಾಲಿಬಾನ್‌ನೊಂದಿಗೆ ಶಾಂತಿ ಮಾತುಕತೆ ನಡೆಸುವ ಸರ್ಕಾರದ ಪ್ರಯತ್ನದ ಮುಂದಾಳತ್ವವನ್ನು ರಬ್ಬಾನಿ ವಹಿಸಿದ್ದರು. ಹತ್ತು ವರ್ಷಗಳಿಂದ ಪಶ್ಚಿಮ ರಾಷ್ಟ್ರಗಳ ಮೈತ್ರಿ ಪಡೆಗಳ ನೆರವಿನೊಂದಿಗೆ ತಾಲಿಬಾನ್ ವಿರುದ್ಧ ಆಫ್ಘನ್ ಸರ್ಕಾರ ನಡೆಸುತ್ತಿರುವ ಹೋರಾಟ ಕೊನೆಗಾಣಬಹುದು ಎಂಬ ಪುಟ್ಟ ವಿಶ್ವಾಸ ಕೂಡ ರಬ್ಬಾನಿ ಹತ್ಯೆಯಿಂದ ದೂರವಾಗಿದೆ ಎಂದು ಹೇಳಲಾಗುತ್ತಿದೆ.

ಅವಿವೇಕ ಕೃತ್ಯ: ಒಬಾಮ
ವಾಷಿಂಗ್ಟನ್ ವರದಿ: ಆಫ್ಘನ್ ಮಾಜಿ ಅಧ್ಯಕ್ಷ ರಬ್ಬಾನಿ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಇದೊಂದು `ಅವಿವೇಕದ ಹಿಂಸಾ ಕೃತ್ಯ~ ಎಂದು ಹೇಳಿದ್ದಾರೆ.

ಆಫ್ಘಾನಿಸ್ತಾನವನ್ನು ಸುರಕ್ಷತೆ ಮತ್ತು ಅಭಿವೃದ್ಧಿ ಪಥದಲ್ಲಿ ಸಾಗಿಸಲು ಅಮೆರಿಕ ನೀಡುತ್ತಿರುವ ನೆರವಿಗೆ ಈ ದಾಳಿಯಿಂದಾಗಿ ಯಾವುದೇ ಧಕ್ಕೆ ಇಲ್ಲ ಎಂದೂ ಅವರು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.