ADVERTISEMENT

ರವಿಶಂಕರ್‌ಗೆ ಮರಣೋತ್ತರ ಗ್ರ್ಯಾಮಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST
ಮಹಾನ್ ಸಿತಾರ್ ವಾದಕ ಪಂಡಿತ್ ರವಿಶಂಕರ್
ಮಹಾನ್ ಸಿತಾರ್ ವಾದಕ ಪಂಡಿತ್ ರವಿಶಂಕರ್   

ವಾಷಿಂಗ್ಟನ್ (ಪಿಟಿಐ): ಬುಧವಾರ ಕಣ್ಮರೆಯಾದ ಮಹಾನ್ ಸಿತಾರ್ ವಾದಕ ಪಂಡಿತ್ ರವಿಶಂಕರ್ ಅವರ ಜೀವಮಾನದ ಸಾಧನೆಗಾಗಿ ಮರಣೋತ್ತರ ಗ್ರ್ಯಾಮಿ ಪ್ರಶಸ್ತಿ ನೀಡಿ ಗೌರವಿಸುವುದಾಗಿ ಸಂಘಟಕರು ತಿಳಿಸಿದ್ದಾರೆ.

ಲಾಸ್‌ಏಂಜಲೀಸ್‌ನಲ್ಲಿ ಫೆಬ್ರುವರಿ 10ರಂದು ನಡೆಯಲಿರುವ 55ನೇ ಗ್ರ್ಯಾಮಿ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗ್ರ್ಯಾಮಿ ಪ್ರಶಸ್ತಿ ನೀಡುವ ರೆಕಾರ್ಡಿಂಗ್ ಅಕಾಡೆಮಿ ಹೇಳಿದೆ.

ಜಗತ್ತಿನ ಪ್ರಖ್ಯಾತ ಸಿತಾರ್ ವಾದಕರಲ್ಲಿ ಒಬ್ಬರಾದ, ಮೂರು ಸಲ ಗ್ರ್ಯಾಮಿ ಪ್ರಶಸ್ತಿ ಪಡೆದಿರುವ ರವಿಶಂಕರ್ ಅಂತರರಾಷ್ಟ್ರೀಯ ಸಂಗೀತದ ನಿಜವಾದ ರಾಯಭಾರಿಯಾಗಿದ್ದಾರೆ ಎಂದೂ ರೆಕಾರ್ಡಿಂಗ್ ಅಕಾಡೆಮಿ ಹೇಳಿದೆ.
ಭಾರತದ ಬಗ್ಗೆ ಆಸಕ್ತಿ ಹುಟ್ಟಿಸಿದ ರವಿಶಂಕರ್:  ಭಾರತದ ಬಗ್ಗೆ, ಇಲ್ಲಿನ ಮಹಾನ್ ನಾಗರಿಕತೆ ಬಗ್ಗೆ  ತಮ್ಮ ಸಂಗೀತದ ಮೂಲಕವೇ ರವಿಶಂಕರ್ ಪಾಶ್ಚಿಮಾತ್ಯರಲ್ಲಿ ಆಸಕ್ತಿ ಹುಟ್ಟಿಸಿದ್ದರು.

ಭಾರತೀಯ ಸಂಗೀತದ ಜ್ಞಾನವಿಲ್ಲದ ಪ್ರೇಕ್ಷಕರಿಗೂ ಈ ಸಂಗೀತ ಸುಧೆಯ ರುಚಿ ಹತ್ತಿಸಿದರು ಎಂದು ವಾಷಿಂಗ್ಟನ್‌ನ ಏಷ್ಯಾ ಸೊಸೈಟಿಯ ಜಾಗತಿಕ ಪ್ರದರ್ಶನ ಕಲಾ ವಿಭಾಗದ ನಿರ್ದೇಶಕ ರಾಚೆಲ್ ಕೂಪರ್ ಹೇಳಿದ್ದಾರೆ.

ಭಾರತೀಯ ಸಾಂಸ್ಕೃತಿಕ ಪರಂಪರೆಯ ಘನತೆಯ ವಿಚಾರ ಬಂದಾಗ ರವಿಶಂಕರ್ ಅದನ್ನು ಬಲವಾಗಿ ಬೆಂಬಲಿಸುತ್ತಿದ್ದರು. ಜಾಗತಿಕ ಸಾಂಸ್ಕೃತಿಕ ಧಾರೆಯ ಮೇಲೂ ಅವರು ಪ್ರಭಾವ ಬೀರಿದ್ದರು. ಪಾಶ್ಚಿಮಾತ್ಯ ಸಂಗೀತದ ಬಗೆಗಿನ ಜ್ಞಾನದಿಂದಾಗಿ ಭಾರತೀಯ ಸಂಗೀತದ ರಾಗಗಳನ್ನು ಯೆಹೂದಿ ಮೆನುಹಿನ್ ತರಹದ ಪಶ್ಚಿಮದ ಶಾಸ್ತ್ರೀಯ ಸಂಗೀತಗಾರರು ಹಾಗೂ ಬೀಟಲ್ಸ್‌ನ ಜಾರ್ಜ್ ಹ್ಯಾರಿಸನ್ ತರಹದವರ ಜತೆ ಹಂಚಿಕೊಂಡರು ಎಂದೂ ಕೂಪರ್ ತಿಳಿಸಿದ್ದಾರೆ.

ರವಿಶಂಕರ್ ಸಾವಿನಿಂದ ಕೇವಲ ಸಂಗೀತ ಕ್ಷೇತ್ರಕ್ಕೆ ನಷ್ಟವಾಗಿಲ್ಲ. ಕಲೆಯ ಮೂಲಕ ದೇಶ, ಭಾಷೆಗಳ ಗಡಿ ಮೀರಿ ಬಾಂಧವ್ಯ ಬೆಳೆಸಬಹುದು ಎಂಬ ನಂಬಿಕೆ ಹೊಂದಿದವರಿಗೆಲ್ಲ ಇದರಿಂದ ನಷ್ಟವಾಗಿದೆ. ಆರ್ಥಿಕ ಜಾಗತೀಕರಣದ ಪ್ರಕ್ರಿಯೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವ ಕೆಲ ವರ್ಷಗಳ ಮುನ್ನವೇ ರವಿಶಂಕರ್ ಕಲೆಯ ಮೂಲಕ ಈ ದೇಶಗಳ ಗಡಿ ಮೀರಿದ್ದರು ಎಂದು ಏಷ್ಯಾ ಸೊಸೈಟಿಯ ಮಾಜಿ ಅಧ್ಯಕ್ಷ ವಿಶಾಖ ದೇಸಾಯಿ ಹೇಳಿದ್ದಾರೆ.

ರವಿಶಂಕರ್ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪೇಟಾ (ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಎನಿಮಲ್ಸ್) ಮತ್ತು ಪೇಟಾ ಇಂಡಿಯಾ, ರವಿಶಂಕರ್ ತಮ್ಮ ಮಗಳು ಅನುಷ್ಕಾ ಜತೆ ಸೇರಿ ಪ್ರಾಣಿಗಳ ರಕ್ಷಣೆಗಾಗಿ ಬಲವಾದ ಕಾಯ್ದೆ ರೂಪಿಸಲು ಒತ್ತಾಯಿಸುವ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ರೆಸ್ಟೋರೆಂಟ್‌ಗಳಲ್ಲಿ ಕೋಳಿಗಳನ್ನು ಹಿಂಸಿಸಿ ಕೊಲ್ಲದಂತೆ `ಕೆಎಫ್‌ಸಿ'ಗೆ ಒತ್ತಾಯಿಸಿದ್ದರು ಎಂದು ಹೇಳಿವೆ.

ರವಿಶಂಕರ್ ಗೌರವಾರ್ಥ ಭಾರತ ಸರ್ಕಾರ 2011ರ ಪ್ರಾಣಿ ಕಲ್ಯಾಣ ಮಸೂದೆಗೆ ಅಂಗೀಕಾರ ಸಿಗುವಂತೆ ಕಾಯ್ದೆ ರೂಪಿಸಬೇಕು ಎಂದೂ ಅದು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.