ADVERTISEMENT

ರಷ್ಯಾ ಅಧ್ಯಕ್ಷರ ಆಸ್ತಿ ಬರೀ ರೂ. 1 ಕೋಟಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 19:59 IST
Last Updated 13 ಏಪ್ರಿಲ್ 2013, 19:59 IST

ಮಾಸ್ಕೊ (ಐಎಎನ್‌ಎಸ್/ಆರ್‌ಐಎ ನೊವೊಸ್ತಿ): ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಮತ್ತು ಪ್ರಧಾನಿ ಡಮಿಟ್ರಿ ಮೆಡ್ವೆಡೇವ್ ಅವರು 2012ನೇ ಸಾಲಿನ ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದಾರೆ. ಇವರಿಬ್ಬರು ತಲಾ ಅಂದಾಜು 58 ಲಕ್ಷ ರೂಬಲ್‌ಗಳ (ಅಂದಾಜು 1,87,000 ಡಾಲರ್-ರೂ.1,02,85,000) ಒಡೆಯರಾಗಿದ್ದಾರೆ.

ಆಸ್ತಿ ವಿವರ ಅಧ್ಯಕ್ಷರ ಮತ್ತು ಸರ್ಕಾರದ ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಿದೆ.

2011ರಲ್ಲಿ 37 ಲಕ್ಷ ರೂಬಲ್‌ಗಳಷ್ಟಿದ್ದ (ಅಂದಾಜು 1,19,000 ಡಾಲರ್-ರೂ.65.45 ಲಕ್ಷ) ಪುಟಿನ್ ಅವರ ಆಸ್ತಿ, ಒಂದು ವರ್ಷದ ಅವಧಿಯಲ್ಲಿ 21 ಲಕ್ಷ ರೂಬಲ್‌ಗಳಷ್ಟು (ಅಂದಾಜು 67,500 ಡಾಲರ್-ರೂ.37,12,500 ಲಕ್ಷ) ವೃದ್ಧಿಯಾಗಿದೆ.

ಪುಟಿನ್ ಅವರು ಜಮೀನು, ಅಪಾರ್ಟ್‌ಮೆಂಟ್, ಗ್ಯಾರೇಜ್, ಮೂರು ಕಾರುಗಳನ್ನು ಹೊಂದಿದ್ದಾರೆ. ಅವರ ಪತ್ನಿ ಲೇಯದ್‌ಮಿಲಾ, 1,21,400 ರೂಬಲ್‌ಗಳಷ್ಟು ಆಸ್ತಿ ಹೊಂದಿದ್ದಾರೆ. (3,900 ಡಾಲರ್-ರೂ.2,14,500).

2011ರಲ್ಲಿ ರಷ್ಯಾದ ಅಧ್ಯಕ್ಷರಾಗಿದ್ದ ಮೆಡ್ವೆಡೇವ್ ಅವರು 34 ಲಕ್ಷ ರೂಬಲ್‌ಗಳಷ್ಟು (1.09 ಲಕ್ಷ ಡಾಲರ್-ರೂ.59.95 ಲಕ್ಷ)  ಆಸ್ತಿ ಹೊಂದಿದ್ದರು. ದೀರ್ಘಾವಧಿಗೆ ಜಮೀನು ಗುತ್ತಿಗೆ ಪಡೆದಿರುವ ಮೆಡ್ವೆಡೇವ್, ಅಪಾರ್ಟ್‌ಮೆಂಟ್ ಮತ್ತು ಮೂರು ಕಾರುಗಳನ್ನು ಹೊಂದಿದ್ದಾರೆ.

ಮೆಡ್ವೆಡೇವ್ ಅವರ ಪತ್ನಿ ಸ್ವೆತ್‌ಲಾನಾ ಅವರು ಯಾವುದೇ ಆಸ್ತಿ ಘೋಷಣೆ ಮಾಡಿಲ್ಲ. ಆದರೆ ಫೋಕ್ಸ್‌ವ್ಯಾಗನ್ ಗಾಲ್ಫ್  ಕಾರು ಮತ್ತು ಎರಡು ಪಾರ್ಕಿಂಗ್ ಸ್ಥಳಗಳ ಒಡೆತನ ಹೊಂದಿರುವುದಾಗಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.