ADVERTISEMENT

ಲಂಡನ್ ನಿಲ್ದಾಣದಲ್ಲಿ ತಪಾಸಣೆ ರಾಮ್‌ದೇವ್‌ಗೆ ಮುಜುಗರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 19:59 IST
Last Updated 21 ಸೆಪ್ಟೆಂಬರ್ 2013, 19:59 IST

ನವದೆಹಲಿ (ಐಎಎನ್ಎಸ್‌): ಯೋಗ ಗುರು ಬಾಬಾ ರಾಮ್‌ ದೇವ್‌ ಅವರನ್ನು ಲಂಡನ್ನಿನ ಹೀಥ್ರೊ ವಿಮಾನ ನಿಲ್ದಾಣದಲ್ಲಿ ಸುಮಾರು 8 ಗಂಟೆಗಳ ಕಾಲ ವಶಕ್ಕೆ ತೆಗೆದುಕೊಂಡ ಕಸ್ಟಮ್ಸ್ ಅಧಿಕಾರಿಗಳು ನಂತರ ಬಿಡುಗಡೆ ಮಾಡಿದ ಘಟನೆ ಶನಿವಾರ ನಸುಕಿನಲ್ಲಿ ನಡೆದಿದೆ.
‘ರಾಮ್‌ದೇವ್‌ ಅವರನ್ನು ಪ್ರಶ್ನಿಸಲೂ ಇಲ್ಲ. ಅಥವಾ ಅವರ ಬಳಿ ಇದ್ದ ಸರಂಜಾಮುಗಳನ್ನು ತಪಾಸಣೆ ಮಾಡಲೂ ಇಲ್ಲ. ಇದರಿಂದ ಬಾಬಾಗೆ ಇರಿಸುಮುರಿಸು ಆಯಿತು’ ಎಂದು ಅವರ ವಕ್ತಾರ ಎಸ್‌.ಕೆ. ತೇಜರ್‌ವಾಲ್ ದೆಹಲಿಯಲ್ಲಿ ತಿಳಿಸಿದ್ದಾರೆ.

ಪ್ರಯಾಣದ ಸಮಯದಲ್ಲಿ ರಾಮ್‌ದೇವ್‌ ಅವರು ವಾಣಿಜ್ಯ ವೀಸಾ ಬದಲಿಗೆ ಪ್ರವಾಸಿ ವೀಸಾ ಬಳಸಿದ್ದರ ಕುರಿತು ಅಧಿಕಾರಿಗಳು ಪದೇಪದೇ ಪ್ರಶ್ನಿಸಿದ್ದಾರೆ ಎನ್ನಲಾ ಗಿದೆ. ಅಲ್ಲದೇ. ರಾಮ್‌ದೇವ್‌  ತಮ್ಮ ಜತೆಗೆ ಕೊಂಡೊಯ್ದಿದ್ದ ಔಷಧಿಗಳ ಕುರಿತಾಗಿಯೂ ಅಧಿಕಾರಿ­­ಗಳು ತೀವ್ರ ವಿಚಾರಣೆ ನಡೆಸಿದ್ದಾರೆ.

‘ರಾಮ್‌ದೇವ್‌ ಅವರನ್ನು ತಪಾಸಣಾ ಅಧಿಕಾರಿಗಳು ಹಲವು ಬಾರಿ ಪ್ರಶ್ನಿಸಿದ್ದಾರೆ. ಅವರು ಯಾವುದೇ ಅಪರಾಧ ಎಸಗಿಲ್ಲ ಹಾಗೂ ಕಾನೂನು ಪರಿಧಿ ದಾಟಿಲ್ಲ. ಆದರೂ ಅವರನ್ನು ಏಕೆ ಇಷ್ಟೊಂದು ತಪಾಸಣೆ ನಡೆಸಿದಿರಿ? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರೆ ಅವರು ಯಾವುದೇ ಉತ್ತರ ನೀಡ ಲಿಲ್ಲ ಎಂದು ತೇಜರ್‌ವಾಲ್‌ ತಿಳಿಸಿದ್ದಾರೆ.

ಬಾಬಾ ಕೇವಲ ನಾಲ್ಕು ಜತೆ  ಬಟ್ಟೆ, ಸಂಸ್ಕೃತ, ಹಿಂದಿಯಲ್ಲಿ ಮಂತ್ರ ಗಳನ್ನು ಬರೆದಿದ್ದ ದಿನಚರಿಯನ್ನು ಕೊಂಡೊಯ್ದಿದ್ದರು. ಇಂಥ ವ್ಯಕ್ತಿ ಯನ್ನು ತಪಾಸಣೆ ನಡೆಸಿರುವುದು 125ಕೋಟಿ ಭಾರತೀಯರ ಪ್ರತಿಷ್ಠೆ ಮತ್ತು ಗೌರವಕ್ಕೆ ಧಕ್ಕೆ ತಂದಿದೆ ಎಂದ ಅವರು, ಈ ಹಿಂದೆ  ಇಂಗ್ಲೆಂಡ್‌ಗೆ ಅವರು ಹಲವು ಬಾರಿ ಭೇಟಿ ನೀಡಿದ್ದಾರೆ. ಅಲ್ಲದೇ ಅಲ್ಲಿ ಬಹಳಷ್ಟು ಯೋಗ ಶಿಬಿರಗಳನ್ನೂ ಆಯೋಜಿಸಿದ್ದಾರೆ ಎಂದೂ ವಿವರಿಸಿದರು.

ಎರಡನೇ ದಿನವೂ ನಿರಂತರ ಪ್ರಶ್ನೆ
ಲಂಡನ್‌ (ಪಿಟಿಐ):
ಬಾಬಾ ರಾಮ್‌ದೇವ್‌ ಅವರನ್ನು ಹೀಥ್ರೊ ವಿಮಾನ ನಿಲ್ದಾಣ ಅಧಿಕಾರಿಗಳು  ಶನಿವಾರ ಮತ್ತೊಮ್ಮೆ ಪ್ರಶ್ನೆಗೊಳಪ­ಡಿ­­ಸಿ­ದರು.

ಬಿಸಿನೆಸ್‌ ವೀಸಾ ಬದಲು ಪ್ರವಾಸಿ ವೀಸಾ ಬಳಸಿರುವುದರಿಂದ   ಅವ ರನ್ನು  ಅಧಿಕಾರಿಗಳು ಮತ್ತೊಮ್ಮೆ ಪ್ರಶ್ನೆಗೊಳಪಡಿಸಿದ್ದಾಗಿ ಮೂಲ­ಗಳು ತಿಳಿಸಿವೆ.

ತಪ್ಪು ಮಾಡಿಲ್ಲ:  ‘ನನ್ನನ್ನು ಯಾಕೆ ವಶಕ್ಕೆ ತೆಗೆದುಕೊಳ್ಳಲಾಯಿತು ಎನ್ನುವುದಕ್ಕೆ ಅಧಿಕಾರಿಗಳು ಕಾರಣ ನೀಡಲಿಲ್ಲ. ನಾನು ಎಂದೂ ಅಕ್ರಮ ಎಸಗಿದವನಲ್ಲ’ ಎಂದು ರಾಮ್‌ದೇವ್‌ ಹೇಳಿದ್ದಾರೆ. ಸ್ವಾಮಿ ವಿವೇಕಾನಂದರ 120ನೇ  ಜನ್ಮವರ್ಷಾಚರಣೆ ಪ್ರಯುಕ್ತ ಲಂಡನ್‌ನಲ್ಲಿ ಪತಂಜಲಿ ಯೋಗಪೀಠ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ರಾಮದೇವ್‌ ಇಲ್ಲಿಗೆ ಬಂದಿದ್ದಾರೆ.

ವಶಕ್ಕೆ ಏನು ಕಾರಣ?: ರಾಮ್‌ದೇವ್‌ ಅವರ ಬಳಿ ಹಿಂದಿ ಹಾಗೂ ಸಂಸ್ಕೃತ ಪುಸ್ತಕಗಳು ಇದ್ದಿದ್ದರಿಂದ ಅಧಿಕಾರಿಗಳು ಅವರನ್ನು ಪ್ರಶ್ನೆಗೊಳಪ­ಡಿಸಿದರು ಎನ್ನುತ್ತಾರೆ  ಕಾರ್ಯಕ್ರಮದ ಆಯೋಜಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.