ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನಕ್ಕೆ ಅಕ್ರಮವಾಗಿ ಪ್ರವೇಶಿಸಿದ ಮತ್ತು ವಾಸ ಮಾಡಿದ ಕಾರಣಕ್ಕೆ ಒಸಾಮ ಬಿನ್ ಲಾಡೆನ್‌ನ ಮೂವರು ವಿಧವಾ ಪತ್ನಿಯರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮಕ್ಕಳಿಗೆ ದೇಶ ಬಿಡಲು ಅನುಮತಿ ನೀಡಲಾಗಿದೆ ಎಂದು ಗೃಹ ಸಚಿವ ರೆಹಮಾನ್ ಮಲಿಕ್ ಅವರು ತಿಳಿಸಿದ್ದಾರೆ.
ಎಫ್‌ಐಎ ಮತ್ತು ಕಾನೂನು ತಜ್ಞರು ಒಸಾಮನ ಪತ್ನಿಯರ ವಿರುದ್ಧ ಕ್ರಮ ಜರುಗಿಸಬೇಕು ಎಂದು ನಿರ್ಧರಿಸಿದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲು ಮಾಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನದಲ್ಲಿಡಲಾಗಿದೆ ಎಂದು ತಿಳಿಸಿದ್ದಾರೆ.
ಲಾಡೆನ್‌ನ ಮಕ್ಕಳು ಅಪ್ರಾಪ್ತ ವಯಸ್ಸಿನವರು. ಆದುದರಿಂದ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ಅವರು ದೇಶ ಬಿಟ್ಟು ಹೋಗಲು ಅನುಮತಿ ನೀಡಲಾಗಿದೆ ಎಂದು ಮಲಿಕ್ ಹೇಳಿದ್ದಾರೆ.
ಲಾಡೆನ್ ಕುಟುಂಬದ ಒಟ್ಟು ಸದಸ್ಯರ ಸಂಖ್ಯೆಯನ್ನು ಮಲಿಕ್ ಬಹಿರಂಗಗೊಳಿಸಿಲ್ಲ.
ನ್ಯಾಯಾಂಗ ಬಂಧನದಲ್ಲಿರುವ ಲಾಡೆನ್‌ನ ವಿಧವಾ ಪತ್ನಿಯರು ವಕೀಲರನ್ನು ನೇಮಿಸಿಕೊಂಡು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲು ಸ್ವತಂತ್ರರಾಗಿದ್ದಾರೆ ಎಂದು ಮಲಿಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.