ಲಂಡನ್ (ಐಎಎನ್‌ಎಸ್): ಲಿಬಿಯಾದ ತಾತ್ಕಾಲಿಕ ಸರ್ಕಾರಕ್ಕೆ (ಎನ್‌ಟಿಸಿ) ನೆರವು ನೀಡುವ ಸಲುವಾಗಿ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ಹಾಗೂ ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರು ಗುರುವಾರ ಟ್ರಿಪೋಲಿಗೆ ಭೇಟಿ ನೀಡಿರುವುದಾಗಿ ಬಿಬಿಸಿ ವರದಿ ಮಾಡಿದೆ.
ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಪದಚ್ಯುತಿ ಬಳಿಕ ಲಿಬಿಯಾಗೆ ಇದೇ ಮೊದಲ ಬಾರಿ ಇಬ್ಬರು ಅಂತರರಾಷ್ಟ್ರೀಯ ನಾಯಕರು ಭೇಟಿ ನೀಡಿರುವುದು ವಿಶೇಷವಾಗಿದೆ. ಬಂಡುಕೋರರ ಪ್ರಾಬಲ್ಯ ಇರುವ ಬೆಂಘಝಿ ಭೇಟಿಗೆ ಮುನ್ನ ಉಭಯ ನಾಯಕರು ಎನ್‌ಟಿಸಿ ಮುಖಂಡರ ಜತೆ ಸಮಾಲೋಚನೆ ನಡೆಸಲಿದ್ದಾರೆ.
ಭದ್ರತೆಗೆ ಸಂಬಂಧಿಸಿದಂತೆ ಎನ್‌ಟಿಸಿಗೆ ಸಲಹೆ ನೀಡಲು ಬ್ರಿಟನ್ ಸೇನಾ ತಂಡವನ್ನು ನಿಯೋಜಿಸುವ ಸಾಧ್ಯತೆ ಇದೆ. ಅಲ್ಲದೇ ತನ್ನ ವಶದಲ್ಲಿರುವ 500 ದಶಲಕ್ಷ ಪೌಂಡ್ ಲಿಬಿಯಾ ಸಂಪತ್ತನ್ನು ಶೀಘ್ರವೇ ತಾತ್ಕಾಲಿಕ ಸರ್ಕಾರಕ್ಕೆ ಹಿಂದಿರುಗಿಸಲಿದೆ. ಅಲ್ಲದೇ ಯುದ್ಧದ ಅವಶೇಷಗಳನ್ನು ತೆರವುಗೊಳಿಸಲು ಹಾಗೂ ಪೊಲೀಸ್ ಸಂವಹನ ವ್ಯವಸ್ಥೆ ಬಲಪಡಿಸು ತಲಾ 6 ಲಕ್ಷ ಪೌಂಡ್ ನೆರವು ನೀಡುವ ನಿರೀಕ್ಷೆಇದೆ. ಕೆಮರಾಜ್ ಜತೆ ವಿದೇಶಾಂಗ ಸಚಿವ ವಿಲಿಯಂ ಹಾಗ್ ಕೂಡ ಲಿಬಿಯಾ ಪ್ರವಾಸದಲ್ಲಿ ಇದ್ದಾರೆ.
13 ಸಾಮೂಹಿಕ ಸಮಾಧಿ ಪತ್ತೆ...!
ಜಿನಿವಾ, (ಎಪಿ): ಕಳೆದ ಮೂರು ವಾರಗಳಲ್ಲಿ ಲಿಬಿಯಾದಲ್ಲಿ 13 ಸಾಮೂಹಿಕ ಸಮಾಧಿಗಳು ಪತ್ತೆಯಾಗಿವೆ ಎಂದು ರೆಡ್ ಕ್ರಾಸ್‌ನ ಅಂತರರಾಷ್ಟ್ರೀಯ ಸಮಿತಿ ಹೇಳಿದೆ.
ಜಿನಿವಾದಲ್ಲಿರುವ ರೆಡ್ ಕ್ರಾಸ್ ಸಿಬ್ಬಂದಿಯ ನೆರವಿನಿಂದ ಟ್ರಿಪೋಲಿಯ ಸುತ್ತಮುತ್ತ ಹನ್ನೆರಡು ವಿಭಿನ್ನ ಸ್ಥಳಗಳಲ್ಲಿ 125 ಮೃತ ದೇಹಗಳು ದೊರಕಿವೆ.
ಪಶ್ಚಿಮ ಲಿಬಿಯಾದಲ್ಲಿರುವ ನಫುಸಾ ಪರ್ವತಗಳ ಗ್ರಾಮ ಗಲಾದಲ್ಲಿರುವ ಪ್ರದೇಶದಲ್ಲಿ ಕೂಡ 34 ಶವಗಳು ದೊರಕಿವೆ ಎಂದು ಅದು ಹೇಳಿದೆ. ಪ್ರತಿ ವಾರ ಬಹಳಷ್ಟು ಸಾಮೂಹಿಕ ಸಮಾಧಿಗಳು ದೊರಕುತ್ತಿವೆ ಎಂದು ಅಂತರರಾಷ್ಟ್ರೀಯ ರೆಡ್ ಕ್ರಾಸ್‌ನ ವಕ್ತಾರ ಸ್ಟೀವನ್ ಆ್ಯಂಡರ್ಸನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.