ADVERTISEMENT

ವಿಕಿರಣ ಸೋರಿಕೆ ಪ್ರಮಾಣ ಬಹಿರಂಗ

ವಿದೇಶಿ ಸಂಕ್ಷಿಪ್ತ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 19:59 IST
Last Updated 4 ಆಗಸ್ಟ್ 2013, 19:59 IST

ಟೊಕಿಯೊ (ಎಎಫ್‌ಪಿ): ಭೀಕರ ಸುನಾಮಿಯಿಂದಾಗಿ ಹಾನಿಗೊಂಡಿದ್ದ ಪುಕುಶಿಮಾ ಪರಮಾಣು ಸ್ಥಾವರದಲ್ಲಿ ಇದುವರೆಗೂ ಸೋರಿಕೆಯಾಗಿರುವ ವಿಕಿರಣದ ಅಂದಾಜು ಪ್ರಮಾಣವನ್ನು `ಟೊಕಿಯೊ ವಿದ್ಯುತ್ ಶಕ್ತಿ ಕೊ.' (ಟಿಇಪಿಸಿಒ- ಟೆಪ್ಕೊ) ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದೆ.

2011ರಲ್ಲಿ ಸಂಭವಿಸಿದ ಸುನಾಮಿಯಿಂದ ಹಾನಿಗೊಳಗಾದ ಪುಕುಶಿಮಾ ಸ್ಥಾವರದಿಂದ ಇಲ್ಲಿಯವರೆಗೆ,  ಅಂದಾಜು 20- 40 ಟ್ರಿಲಿಯನ್ ಬೆಕ್ವೆರೆಲ್ಸ್‌ನಷ್ಟು (ಒಂದು ಸೆಕೆಂಡ್‌ಗೆ ಒಂದು ನ್ಯೂಕ್ಲಿಯಸ್ ನಾಶವನ್ನು ಒಂದು ಬೆಕ್ವೆರಲ್ ಎನ್ನ ಲಾಗುತ್ತದೆ) ವಿಕಿರಣಶೀಲ ಟ್ರಿಟಿಯಂ ಇಲ್ಲಿನ ಪೆಸಿಫಿಕ್ ಸಾಗರಕ್ಕೆ ಸೋರಿಕೆಯಾಗಿದೆ ಎಂದು `ಟೆಪ್ಕೊ' ವಕ್ತಾರರು ತಿಳಿಸಿದ್ದಾರೆ.

ಅಲ್ಲದೆ, ಸ್ಥಾವರದಿಂದ ಸೋರಿಕೆಯಾಗಿರಬಹುದಾದ ಕ್ಯಾನ್ಸರ್‌ಕಾರಕ ಸ್ಟ್ರಾಂಟಿಯಂನ ಪ್ರಮಾಣವನ್ನು ಕೂಡ ಅಂದಾಜಿಸುವುದಾಗಿ `ಟೆಪ್ಕೊ' ಇದೇ ಸಂದರ್ಭದಲ್ಲಿ ಹೇಳಿದೆ.

ಪುಕುಶಿಮಾ ಪರಮಾಣು ಸ್ಥಾವರದಿಂದ ವಿಕಿರಣ ಸೋರಿಕೆಯಾಗುತ್ತಿರುವುದರಿಂದ ಪೆಸಿಫಿಕ್ ಸಾಗರ ಕಲುಷಿತಗೊಳ್ಳುತ್ತಿದೆ ಎಂದು ಜಪಾನ್‌ನ `ಪರಮಾಣು ಕಾವಲು ಸಮಿತಿ' ಅನುಮಾನ ವ್ಯಕ್ತಪಡಿಸಿದ ಬೆನ್ನಲ್ಲೇ, `ಟೆಪ್ಕೊ' ವಿಕಿರಣ ಸೋರಿಕೆಯ ಮಾಹಿತಿಯನ್ನು ಹೊರಹಾಕಿದೆ.

ಅತಿ ಎತ್ತರದ ವಿಮಾನ ನಿಲ್ದಾಣ ನಿರ್ಮಾಣ
ಬೀಜಿಂಗ್(ಪಿಟಿಐ):
ಟಿಬೆಟ್‌ಗೆ ಹೊಂದಿಕೊಂಡಿರುವ ಹಿಮಾಲಯದ ಅತಿ ಎತ್ತರದ ಪ್ರದೇಶದಲ್ಲಿ ಚೀನಾವು ನಾಗರಿಕ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಕೈಗೊಂಡಿದೆ. ಇದು ಜಗತ್ತಿನಲ್ಲಿಯೇ ಅತಿ ಎತ್ತರದಲ್ಲಿರುವ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ರಾಷ್ಟ್ರ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಆಯಕಟ್ಟಿನ ಪ್ರದೇಶವಾದ ಸಿಚುವಾನ್ ಪ್ರಾಂತ್ಯದ ಟಿಬೆಟಿಯನ್ ಸ್ವಾಯತ್ತ ಪ್ರದೇಶದಲ್ಲಿ 4,411 ಮೀಟರ್ ಎತ್ತರದಲ್ಲಿ ಈ ನಿಲ್ದಾಣದ ಕಾಮಗಾರಿ ನಡೆದಿದೆ.

ಪ್ರಸ್ತುತ ಅತ್ಯಂತ ಎತ್ತರ ಪ್ರದೇಶದಲ್ಲಿರುವ ಬಾಂಗ್ಡಾ ವಿಮಾನ ನಿಲ್ದಾಣ ಸಮುದ್ರಮಟ್ಟದಿಂದ 4,334 ಮೀಟರ್ ಎತ್ತರದಲ್ಲಿದ್ದು, ಇದು ಕೂಡ ಚೀನಾದಲ್ಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.