ADVERTISEMENT

ವಿದೇಶಿ ಸಂಕ್ಷಿಪ್ತ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಭಾರತಕ್ಕೆ ಮಲೇಷ್ಯಾ ಮುಖಂಡ 
ಕ್ವಾಲಾಲಂಪುರ (ಪಿಟಿಐ):
ಮಲೇಷ್ಯಾ ವಿರೋಧ ಪಕ್ಷದ ನಾಯಕ ಅನ್ವರ್ ಇಬ್ರಾಹಿಂ ಇದೇ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪ ಎದುರಿಸುತ್ತಿದ್ದ ಇವರನ್ನು ಕ್ವಾಲಾಲಂಪುರದ ಹೈಕೋರ್ಟ್ ಸೋಮವಾರ ದೋಷಮುಕ್ತಗೊಳಿಸಿದೆ.

ತೀರ್ಪು ಪ್ರಕಟವಾದ ಬಳಿಕ ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅನ್ವರ್, ಕೋರ್ಟ್ ತಮ್ಮನ್ನು ಆರೋಪಮುಕ್ತಗೊಳಿಸಿದ್ದಕ್ಕೆ ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಹೇಳಿದರಲ್ಲದೆ, ಆರು ದಿನಗಳ ಒಳಗೆ ಭಾರತಕ್ಕೆ ಭೇಟಿ ನೀಡಲಿರುವುದಾಗಿಯೂ ತಿಳಿಸಿದರು.

ಜಿಹಾದ್ ಪ್ರಚಾರಕ್ಕೆ ಉರ್ದು ಮಾಸಿಕ
ಇಸ್ಲಾಮಾಬಾದ್ (ಪಿಟಿಐ) :
`ಜಿಹಾದ್~ ಅನ್ನು ಪ್ರತಿಪಾದಿಸುವ ಬರಹಗಳನ್ನು ಒಳಗೊಂಡ `ಹೈ ತೀನ್~ ಹೆಸರಿನ ಉರ್ದು ಮಾಸಿಕವೊಂದನ್ನು ಈಗ ಪಾಕಿಸ್ತಾನದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. 200 ಪುಟಗಳ ಈ ನಿಯತಕಾಲಿಕೆಯನ್ನು ಅಂಚೆ ಮೂಲಕ ದಿಯೊಬಂದ್ ಗುಂಪಿನ ಪ್ರಮುಖರಿಗೆ, ಅಲ್‌ಖೈದಾ ಸಿದ್ಧಾಂತದ ಅನುಯಾಯಿಗಳಿಗೆ ತಲುಪಿಸಲಾಗುತ್ತಿದೆ ಎಂದು `ಎಕ್ಸ್‌ಪ್ರೆಸ್ ಟ್ರಿಬ್ಯೂನ್~ ವರದಿ ಮಾಡಿದೆ.

ಒಸಾಮ ಬಿನ್ ಲಾಡೆನ್ ಹತ್ಯೆಯ ಬಳಿಕ ಈ ಮಾಸಿಕವನ್ನು ಆರಂಭಿಸಲಾಗಿದೆ. ಆಫ್ಘಾನಿಸ್ತಾನದ ತಾಲಿಬಾನ್ ಕಮಾಂಡರ್ ಮುಲ್ಲಾ ಒಮರ್ ಹಾಗೂ ಇತರೆ ಅಲ್‌ಖೈದಾ ನಾಯಕರ ಹೇಳಿಕೆಗಳು ಹಾಗೂ ಉಗ್ರಗಾಮಿಗಳನ್ನು ಉತ್ತೇಜಿಸುವ ಬರಹಗಳನ್ನು ಒಳಗೊಂಡ ಈ ನಿಯತಕಾಲಿಕೆ ಪ್ರತಿಕ್ರಿಯೆಗಾಗಿ ಎರಡು ಇ ಮೇಲ್ ವಿಳಾಸಗಳನ್ನು ಮಾತ್ರವೇ ಹೊಂದಿದೆ. ಸಂಪಾದಕ, ಪ್ರಕಾಶಕ ಹಾಗೂ ಮುದ್ರಕರ ಹೆಸರುಗಳನ್ನು ಹೊಂದಿಲ್ಲ.

ಪಾಕ್‌ಗೆ ಮರಳಲಿರುವ  ಮುಷರಫ್
ಕರಾಚಿ (ಪಿಟಿಐ):
ಅಲ್ ಪಾಕಿಸ್ತಾನಿ ಮುಸ್ಲಿಂ ಲೀಗ್ ಪಕ್ಷಕ್ಕೆ ಕಸುವು ತುಂಬುವ ನಿಟ್ಟಿನಲ್ಲಿ ಇದೇ ತಿಂಗಳಾಂತ್ಯಕ್ಕೆ ತಾವು ಸ್ವದೇಶಕ್ಕೆ ಮರಳುವುದಾಗಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ತಿಳಿಸಿದ್ದಾರೆ.

`ಪರಿಸ್ಥಿತಿಗಳನ್ನು ಎದುರಿಸಲು ನನಗೆ ಯಾವುದೇ ಭಯವಿಲ್ಲ. ದೇಶ ಬದಲಾವಣೆಗಾಗಿ ಕಾಯುತ್ತಿದೆ. ಮುಂದಿನ ಮಹಾಚುನಾವಣೆಗಳಲ್ಲಿ ನಾನು ಖೈಬರ್ ಕಣಿವೆಯ ಫಖ್ತೂನ್‌ಖ್ವಾ ಪ್ರಾಂತ್ಯದ ಚಿತ್ರಾಲ್ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ~ ಎಂದು ಮುಷರಫ್ ಹೇಳಿದ್ದಾರೆ.

ಚೆಚನ್ಯಾದಲ್ಲಿ ಘರ್ಷಣೆ: ಎಂಟು ಸಾವು
ರೊಸ್ತಾವ್ ದಾನ್, ರಷ್ಯ(ಎಪಿ):
ಚೆಚನ್ಯಾದ ದಕ್ಷಿಣ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಉಗ್ರರು ಹಾಗೂ ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಅಧಿಕಾರಿಗಳು ಸೇರಿದಂತೆ ಎಂಟು ಮಂದಿ ಸತ್ತು, 18ಮಂದಿ ಗಾಯಗೊಂಡಿದ್ದಾರೆ.  ಎಂದು ರಷ್ಯ ಒಳಾಡಳಿತ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.