ADVERTISEMENT

ವಿದೇಶಿ ಸಂಕ್ಷಿಪ್ತ ಸುದ್ದಿ

​ಪ್ರಜಾವಾಣಿ ವಾರ್ತೆ
Published 28 ಮೇ 2012, 19:30 IST
Last Updated 28 ಮೇ 2012, 19:30 IST

ಡ್ರೋಣ್: ಐವರು ಉಗ್ರರ ಹತ್ಯೆ
ಇಸ್ಲಾಮಾಬಾದ್ (ಪಿಟಿಐ):
ಪಾಕಿಸ್ತಾನದ ಉತ್ತರ ವಜಿರಿಸ್ತಾನ ಗುಡ್ಡಗಾಡು ಪ್ರದೇಶದ ಕಟ್ಟಡಗಳ ಆವರಣ ಮತ್ತು ವಾಹನಗಳನ್ನು ಗುರಿಯಾಗಿಟ್ಟುಕೊಂಡು ಸೋಮವಾರ ಅಮೆರಿಕ ನಡೆಸಿದ ಡ್ರೋಣ್ ದಾಳಿಯಲ್ಲಿ ಐವರು ಉಗ್ರರು ಹತ್ಯೆಯಾಗಿದ್ದಾರೆ.

ಅಮೆರಿಕ ಪ್ರವಾಸ ರದ್ದು
ಇಸ್ಲಾಮಾಬಾದ್ (ಪಿಟಿಐ): ಅಮೆರಿಕ ಮತ್ತು ಪಾಕ್ ನಡುವಿನ ಸಂಬಂಧಕ್ಕೆ ಹಿನ್ನಡೆಯಾಗಿದ್ದರಿಂದ ಐಎಸ್‌ಐ ಹೊಸ ಮುಖ್ಯಸ್ಥ  ಜಹಿರ್ -ಉಲ್- ಇಸ್ಲಾಂ ಅವರು ಈ ವಾರ ನೀಡಬೇಕಿದ್ದ ವಾಷಿಂಗ್ಟನ್ ಭೇಟಿ ರದ್ದಾಗಿದೆ. ಆದರೆ ಭೇಟಿ ರದ್ದಾಗಿರುವುದಕ್ಕೆ ನಿಖರ ಕಾರಣ ಗೊತ್ತಾಗಿಲ್ಲ.

ಆಸ್ತಿ ವಿಸ್ತರಣೆ: ವಿದೇಶಿಗರಿಗೆ ಅವಕಾಶ
ದುಬೈ (ಪಿಟಿಐ): ಒಮನ್‌ನಲ್ಲಿ ವ್ಯವಹಾರ ನಡೆಸುತ್ತಿರುವ ವಿದೇಶಿ ಕಂಪೆನಿಗಳು ಮತ್ತು ವಲಸಿಗರು ಇನ್ನು ಮುಂದೆ ಈಗಿರುವ ಆಸ್ತಿಯನ್ನು ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ.ಸಂವಿಧಾನ ತಿದ್ದುಪಡಿಯ ನಂತರ ಸಂಬಂಧಪಟ್ಟ ಸಚಿವಾಲಯವು ಈ ಅಧಿಕೃತ ಆದೇಶ ಹೊರಡಿಸಿದೆ. ಒಮನ್‌ನಲ್ಲಿ ನೆಲೆಸಿರುವ ವಿದೇಶಿಗರು ಆಸ್ತಿಯನ್ನು ವಿಸ್ತರಿಸಲು ಅವಕಾಶ ಕಲ್ಪಿಸಿದ್ದರೂ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.

ಆಸ್ತಿ ವಿಸ್ತರಣೆ ಅಗತ್ಯವಾಗಿದೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಮತ್ತು ವಸತಿ ಸಚಿವಾಲಯವು ನಿಗದಿಪಡಿಸಿರುವ ಬೆಲೆಯಲ್ಲೇ ಭೂಮಿಯನ್ನು ಖರೀದಿಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ ಎಂದು `ಟೈಮ್ಸ ಆಫ್ ಒಮನ್~ ವರದಿ ಮಾಡಿದೆ.

ಬಾಂಬ್ ದಾಳಿ: ಇಬ್ಬರ ಸಾವು
ಬ್ಯಾಂಕಾಕ್(ಐಎಎನ್‌ಎಸ್):  ಥಾಯ್ಲೆಂಡ್‌ನಲ್ಲಿ ಸೋಮವಾರ ಬಾಂಬ್ ದಾಳಿಯಲ್ಲಿ ಇಬ್ಬರು ರಕ್ಷಣಾ ಸ್ವಯಂಸೇವಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆತ್ಮಾಹುತಿ ಪ್ರತಿಭಟನೆ
ಬೀಜಿಂಗ್ (ಪಿಟಿಐ): ಚೀನಾ ಸರ್ಕಾರದ ವಿರುದ್ಧದ ಆತ್ಮಾಹುತಿ ಪ್ರತಿಭಟನೆ ಈಗ ಲಾಸಾಕ್ಕೂ ಹಬ್ಬಿದ್ದು ಅಲ್ಲಿನ ದೇವಸ್ಥಾನವೊಂದರ ಎದುರಿನಲ್ಲಿ  ಆತ್ಮಾಹುತಿಗೆ ಯತ್ನಿಸಿದ ಇಬ್ಬರು ಟಿಬೆಟನ್ನರ ಪೈಕಿ ಒಬ್ಬ ಯುವಕ ಸತ್ತಿದ್ದಾನೆ.  ಈ ಯುವಕರು ಲಾಸಾದ ಪರಗೊರ ಬೀದಿಯಲ್ಲಿ ಭಾನುವಾರ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಪ್ರತಿಭಟನೆ ನಡೆಸಿದರು.

ಅರ್ಜೆಂಟಿನಾದಲ್ಲಿ ಲಘು ಭೂಕಂಪನ
ವಾಷಿಂಗ್ಟನ್ (ಐಎಎನ್‌ಎಸ್): ಉತ್ತರ ಅರ್ಜೆಂಟಿನಾದ  ಸೆಂಟಿಯಾಗೊ ಡೆಲ್ ಎಸ್ಟಿರೊ ಪ್ರದೇಶದಲ್ಲಿ ಸೋಮವಾರ ಮುಂಜಾನೆ ಲಘು ಭೂಕಂಪನ ಉಂಟಾಗಿದೆ ಎಂದು ಅಮೆರಿಕ ಭೂವಿಜ್ಞಾನ ಸಮೀಕ್ಷೆ(ಯುಎಸ್‌ಜಿಎಸ್) ತಿಳಿಸಿದೆ. 

 ರಿಕ್ಟರ್ ಮಾಪನದಲ್ಲಿ ಭೂಕಂಪನದ ತೀವ್ರತೆ 6.4ರಷ್ಟು ದಾಖಲಾಗಿದ್ದು ಯಾವುದೇ ಅನಾಹುತದ ಬಗ್ಗೆ ವರದಿಯಾಗಿಲ್ಲ.

ಅಸ್ಸಾಂಜ್ ಹಸ್ತಾಂತರ: ನಾಳೆ ತೀರ್ಪು
ಲಂಡನ್ (ಎಎಫ್‌ಪಿ): 
ವಿಕಿಲೀಕ್ಸ್ ಸ್ಥಾಪಕ ಜುಲಿಯನ್ ಅಸ್ಸಾಂಜ್ ಅವರನ್ನು ಬ್ರಿಟನ್‌ನಿಂದ ಸ್ವೀಡನ್‌ಗೆ ಹಸ್ತಾಂತರಿಸುವುದಕ್ಕೆ ಸಂಬಂಧಿಸಿದ ತೀರ್ಪು ಬುಧವಾರ ಹೊರಬೀಳುವ ನಿರೀಕ್ಷೆ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.