ADVERTISEMENT

ವಿದೇಶ; ಸಂಕ್ಷಿಪ್ತ ಸುದ್ದಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST

ವಂಶವಾಹಿಯಲ್ಲಿನ ಮಾರ್ಪಾಟಿನಿಂದ ಅಲ್ಜೈಮರ್ ರೋಗ ದೂರ?
ಲಂಡನ್ (ಪಿಟಿಐ): ನರದೌರ್ಬಲ್ಯ ಹಾಗೂ ನೆನಪಿನ ಶಕ್ತಿ ಕುಂದಲು  ಕಾರಣವಾಗುವ ಅಲ್ಜೈಮರ್ ರೋಗದಿಂದ ಬಳಲುತ್ತಿರುವವರಿಗೊಂದು ಸಿಹಿ ಸುದ್ದಿ...!ಈ ರೋಗಕ್ಕೆ ಕಾರಣವಾಗುವ ಪ್ರೋಟಿನ್‌ವೊಂದನ್ನು ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳು ಹೇಳಿಕೊಂಡಿದ್ದು, ಈ ಮೂಲಕ ರೋಗಕ್ಕೆ ಔಷಧ ಕಂಡುಹಿಡಿಯಬಹುದಾಗಿದೆ ಎಂದು ಹೇಳಿದ್ದಾರೆ.

ಅಮೈಲಾಯ್ಡ ಪ್ರೆಕರ್ಸರ್ ಪ್ರೋಟಿನ್ (ಎಪಿಪಿ) ಎಂಬ ವಂಶವಾಹಿ ಅಮೈಲಾಯ್ಡ ಬೀಟಾ ಎಂಬ ರಾಸಾಯನಿಕ ಬಿಡುಗಡೆ ಮಾಡುತ್ತಿದ್ದು, ಈ ರಾಸಾಯನಿಕ ಮಿದುಳಿನಲ್ಲಿ ನ್ಯೂರಾನ್‌ಗಳು ಪರಸ್ಪರ ಸಂವಹನ ನಡೆಸದಂತೆ ತಡೆಯುತ್ತದೆ.

ಮಾರ್ಪಡಿತ `ಎಪಿಪಿ~ ವಂಶವಾಹಿ ಹೊಂದಿರುವವರಲ್ಲಿ ಅಲ್ಜೈಮರ್ ರೋಗ ಬರುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.ಮಾರ್ಪಡಿತ ವಂಶವಾಹಿ ಬಿಡುಗಡೆ ಮಾಡುವ ಮಾರ್ಪಡಿತ ರಾಸಾಯನಿಕದ ಮಾದರಿಯ ಔಷಧ ನೀಡಿ ಅಲ್ಜೈಮರ್ ರೋಗ ಗುಣಪಡಿಸಬಹುದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಅಧ್ಯಯನದಲ್ಲಿ ಅವರು 2000ಕ್ಕೂ ಹೆಚ್ಚು ಜನರ `ಡಿಎನ್‌ಎ~ ಪರೀಕ್ಷಿಸಿದ್ದರು.

ಹಗಲು ನಿದ್ದೆ: ಡಿಮೆನ್ಶಿಯಾ ಲಕ್ಷಣ
 ಲಂಡನ್ (ಐಎಎನ್‌ಎಸ್): ಹಗಲು ಹೊತ್ತಿನಲ್ಲಿ ನಿದ್ದೆ ಮಾಡುವವರಿಗೆ ಇದು ಎಚ್ಚರಿಕೆ. ಹಗಲಿನಲ್ಲಿ ಪದೇಪದೇ ಲಘು ನಿದ್ದೆಗೆ ಜಾರುವುದು ಡಿಮೆನ್ಶಿಯಾ (ಬುದ್ಧಿಶಕ್ತಿ ಕಡಿಮೆಯಾಗುವ ಮನೋರೋಗ)ದ ಆರಂಭಿಕ ಲಕ್ಷಣ ಅಥವಾ ಈ ರೋಗ ಇನ್ನಷ್ಟು ಹೆಚ್ಚಿಸುವ ಲಕ್ಷಣ ಎಂದು ನರಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.

ಹೆಚ್ಚು ನಿದ್ದೆ ಮತ್ತು ವೃದ್ಧಾಪ್ಯದ ಆಲೋಚನಾ ಸಾಮರ್ಥ್ಯಕ್ಕೂ ನೇರ ಸಂಬಂಧವಿದೆ ಎಂದು ವೈದ್ಯರು ಪ್ರತಿಪಾದಿಸಿದ್ದಾರೆ. 65 ವರ್ಷ ವಯಸ್ಸಿನ ಐದು ನೂರು ಜನರ ಮೇಲೆ ಪರೀಕ್ಷೆ ನಡೆಸಿರುವ ಫ್ರಾನ್ಸ್ ಸಂಶೋಧಕರ ಪ್ರಕಾರ, ಹಗಲು ಹೊತ್ತಿನಲ್ಲಿ ಹೆಚ್ಚು ನಿದ್ದೆ ಮಾಡುವ ಶೇ 5ರಷ್ಟು ಜನರು ಮಾನಸಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಕಳಪೆ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.