ADVERTISEMENT

ವಿಶ್ವಸಂಸ್ಥೆಯಲ್ಲಿ 28ಕ್ಕೆ ಪ್ರಧಾನಿ ಭಾಷಣ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ವಿಶ್ವಸಂಸ್ಥೆ (ಪಿಟಿಐ): ಪ್ರಧಾನಿ ಮನಮೋಹನ್ ಸಿಂಗ್ ಅವರು ಇದೇ 28ರಂದು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಭಾಷಣ ಮಾಡಲಿದ್ದಾರೆ.

ಈ ಹಿಂದೆ ಸಿದ್ಧ ಪಡಿಸಿದ್ದ ಮಹಾಸಭೆಯ ನಡಾವಳಿಯ ಪಟ್ಟಿಯಲ್ಲಿ ಸಿಂಗ್ ಅವರ ಭಾಷಣವು ಸೆ. 27ಕ್ಕೆ ನಿಗದಿಯಾಗಿತ್ತು. ಆದರೆ, ಇದನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಪ್ರಧಾನಿ ಸಿಂಗ್ ಮತ್ತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭೇಟಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಮಾರ್ಪಾಟು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಇಬ್ಬರೂ ಮುಖಂಡರು ಸೆ. 27ರಂದು ಮಧ್ಯಾಹ್ನ ಶ್ವೇತ ಭವನದಲ್ಲಿ ಭೇಟಿಯಾಗುವ ಕಾರ್ಯಕ್ರಮವಿದೆ. ಭೇಟಿ ಸಂದರ್ಭದಲ್ಲಿ ಸಿರಿಯಾ ವಿರುದ್ಧ ಸೇನಾ ಕಾರ್ಯಾಚರಣೆಯೇ ಪ್ರಮಖ ವಿಷಯವಾಗಲಿದೆ ಎನ್ನಲಾಗಿದೆ. ಈ ಕಾರ್ಯಕ್ರಮವನ್ನು ಮುಗಿಸಿಕೊಂಡು ಸಿಂಗ್ ಅವರು ಅಂದು ಸಂಜೆ ವಾಷಿಂಗ್ಟನ್‌ನಿಂದ ನ್ಯೂಯಾರ್ಕ್‌ಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಪ್ರಧಾನಿ ಸಿಂಗ್ ಮತ್ತು ಅಧ್ಯಕ್ಷ ಬರಾಕ್ ಒಬಾಮ ನಿಗದಿಯಾಗಿರುವಂತೆ ಸೆ. 27ರಂದೇ ಭೇಟಿಯಾಗುವರು ಎಂದು ವಾಷಿಂಗ್ಟನ್ ಸ್ಪಷ್ಟಪಡಿಸಿದೆ.

ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಸೆ. 27ರಂದು ಮಹಾಸಭೆಯಲ್ಲಿ ಮಾತನಾಡಲಿದ್ದಾರೆ. ಎರಡನೇ  ಬಾರಿ ಪಾಕ್ ಪ್ರಧಾನಿಯಾದ ನಂತರ ಇದೇ ಮೊದಲ ಬಾರಿಗೆ ಅವರು ಮಹಾಸಭೆಯಲ್ಲಿ ಮಾತನಾಡಲಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.