ADVERTISEMENT

ಶಿಶುವಿಗೆ ಕಿರುಕುಳ: ಶ್ವಾನದ ತಳಮಳ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ವಾಷಿಂಗ್ಟನ್‌(ಪಿಟಿಐ): ಏಳು ತಿಂಗಳ ಮಗು ಆಯಾಳಿಂದ ಕಿರುಕುಳಕ್ಕೆ ಒಳಗಾ­ಗುತ್ತಿರುವ ವಿಷಯವನ್ನು ಸಾಕು ನಾಯಿ ಮೂಲಕ ತಿಳಿದುಕೊಂಡ ದಂಪತಿಯ ಕಥೆಯಿದು.

ಇದು ನಡೆದದ್ದು ಚಾರ್ಲಸ್ಟನ್ ಎಂಬಲ್ಲಿ. ಬೆಂಜಮಿನ್‌ಹಾಗೂ ಹೋಪ್‌­ಜೋರ್ಡಾನ್‌ದಂಪತಿ, ತಮ್ಮ ಏಳು ತಿಂಗಳ ಮಗ ಫಿನ್ ನನ್ನು ನೋಡಿ­ಕೊಳ್ಳಲು ಅಲೆಕ್ಸಿ ಖಾನ್‌ (22) ಎಂಬಾ­ಕೆ­ಯನ್ನು ನೇಮಿಸಿಕೊಂಡಿದ್ದರು. ಆಕೆ ಯ ಪೂರ್ವಾಪರ ವಿಚಾರಿಸಿಕೊಂಡೇ ಕೆಲಸಕ್ಕೆ ತೆಗೆದುಕೊಂಡಿದ್ದರು.

ಆದರೆ ಇವರ ಮನೆಯ ಮುದ್ದಿನ ನಾಯಿ ‘ಕಿಲಿಯನ್’ ವರ್ತನೆಯಿಂದ ದಂಪತಿ ಅನುಮಾನಗೊಂಡರು. ಈ ನಾಯಿ ಆಯಾಳನ್ನು ನೋಡದರೆ ಗುರುಗುಟ್ಟುತ್ತಿತ್ತು.

‘ಖಾನ್‌, ನಮ್ಮ ಮನೆಗೆ ಬಂದು  ಐದು ತಿಂಗಳು ಆಗಿತ್ತು. ಯಾಕೋ ಏನೋ ಗೊತ್ತಿಲ್ಲ. ನಮ್ಮ ನಾಯಿಗೆ ಆಕೆ­ಯನ್ನು ಕಂಡರೆ ಆಗುತ್ತಲೇ ಇರಲಿಲ್ಲ. ಕೆಲ ಕಾಲ ನಾವು ನಾಯಿಯನ್ನು ಕಟ್ಟಿಹಾಕಿದೆವು. ಆಯಾಳ ಮೇಲೂ ಒಂದು ಕಣ್ಣು ಇಟ್ಟೆವು. ನಾವು ಇಲ್ಲದಿ­ರು­ವಾಗ ಮನೆಯಲ್ಲಿ ಏನೇನು ಆಗು­ತ್ತದೆ ಎನ್ನುವುದನ್ನು ಧ್ವನಿ­ಮುದ್ರಿಸಿ­ಕೊಳ್ಳಲು ಕುರ್ಚಿ ಕೆಳಗೆ ಸೆಲ್‌ಫೋನ್ ಇಡಲಾಗಿತ್ತು.

ಮನೆಗೆ ಬಂದು ಅದನ್ನು ಆಲಿಸಿದಾಗ ಬೆಚ್ಚಿಬೀಳುವಂತಾಯಿತು. ಆಯಾ ಮಗುವಿಗೆ ಬಾಯಿಗೆ ಬಂದಂತೆ ಬೈದಿದ್ದು, ಹೊಡೆದಿದ್ದು, ಮಗು ಜೋರಾಗಿ ಕಿರುಚಿದ್ದು ಎಲ್ಲವೂ ಕೇಳಿತು’ ಎಂದು ಬೆಂಜಮಿನ್ ವಿವರಿಸಿದ್ದಾರೆ.

ನಂತರದಲ್ಲಿ ದಂಪತಿ ಆಯಾಳ ವಿರುದ್ಧ ಪೊಲೀಸರಿಗೆ ದೂರು ನೀಡಿದರು. ಕಳೆದವಾರ ಚಾರ್ಲಸ್ಟನ್‌ ಪೊಲೀಸರು ಆಯಾಳನ್ನು ಬಂಧಿಸಿದ್ದು, ಆಕೆ ತಪ್ಪೊಪ್ಪೊಕೊಂಡಿದ್ದಾಳೆ.

ಚಾರ್ಲಸ್ಟನ್ ಕೌಂಟಿ ಸರ್ಕಿಟ್‌ಕೋರ್ಟ್, ಆಯಾಗೆ ಒಂದು ವರ್ಷದಿಂದ ಮೂರು ವರ್ಷ ಅವಧಿಯ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.