ವಾಷಿಂಗ್ಟನ್ (ಪಿಟಿಐ, ಐಎಎನ್‌ಎಸ್): ವಿಶ್ವದ ಮೊದಲ ಕ್ರಾಂತಿಕಾರಿ ನೀರುರಹಿತ ಸೋಲಾರ್ ವಿದ್ಯುತ್ ಶೌಚಾಲಯ ಈ ತಿಂಗಳು ಭಾರತದಲ್ಲಿ ಅನಾವರಣಗೊಳ್ಳಲಿದೆ. ಸುರಕ್ಷಿತ ಮತ್ತು ಸಮರ್ಥ ನೈರ್ಮಲ್ಯದ ಕೊರತೆ ಹೊಂದಿದ ಜಗತ್ತಿನ ಸುಮಾರು 250 ಕೋಟಿ ಜನರಿಗೆ ನೆರವಾಗುವ ಉದ್ದೇಶದೊಂದಿಗೆ ಸೌರ ವಿದ್ಯುತ್ ಬಳಸಿ ಈ ನೀರು ಬಳಸದ ಟಾಯ್ಲೆಟ್ ತಯಾರಿಸಲಾಗಿದೆ.
ಅಮೆರಿಕದ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನ ನೆರವಿನ ಸುಮಾರು ₨4.81 ಕೋಟಿಗಳಷ್ಟು (7,77,000 ಡಾಲರ್) ಅನುದಾನವನ್ನು ಬಳಸಿ ಈ ವಿಶೇಷ ಶೌಚಾಲಯವನ್ನು ವಿನ್ಯಾಸಗೊಳಿಸಿ, ನಿರ್ಮಿಸಲಾಗುತ್ತಿದೆ. ನವೀನ ತಂತ್ರಜ್ಞಾನವನ್ನು ಹೊಂದಿರುವ ಈ ಶೌಚಾಲಯವು ಮಾನವನ ಮಲವನ್ನು ಉನ್ನತ ಸರಂಧ್ರ (ಸೂಕ್ಷ್ಮ ರಂಧ್ರಗಳ) ಜೈವಿಕ ಇದ್ದಿಲು, ‘ಬಯೋಚಾರ್’ ಆಗಿ ಪರಿವರ್ತಿಸಲಿದೆ.
ಬಡವರಿಗೆ ಪರಿಸರ ಪ್ರೇಮಿ ಪರಿಹಾರ ಒದಗಿಸುವ ಗುರಿಯೊಂದಿಗೆ ಈ ಶೌಚಾಲಯವನ್ನು ಸಿದ್ಧಪಡಿಸಲಾಗಿದೆ. ನವದೆಹಲಿಯಲ್ಲಿ ಈ ತಿಂಗಳ 20ರಿಂದ 22ರವರೆಗೆ ವಿಜ್ಞಾನಿಗಳು, ತಂತ್ರಜ್ಞರು ಮತ್ತಿತರ ಗಣ್ಯರ ವೀಕ್ಷಣೆಗಾಗಿ ಈ ತಂತ್ರಜ್ಞಾನವನ್ನು ಪ್ರದರ್ಶನಕ್ಕಿಡಲಾಗುತ್ತದೆ.
ಈ ಶೌಚಾಲಯವು ಸಾಧ್ಯವಾದಷ್ಟು ಅತಿ ಉಷ್ಣಾಂಶದಲ್ಲಿ ಮಾನವನ ಮಲವನ್ನು ಬಿಸಿಯಾಗಿಸಿ, ಸೂಕ್ಷ್ಮ ಕ್ರಿಮಿಗಳಿಲ್ಲದಂತೆ ಸಂಸ್ಕರಿಸಿ, ಅವುಗಳ ಸಂತಾನಶಕ್ತಿಹರಣಗೊಳಿಸಿದ ಬಯೋಚಾರ್‌ನ್ನು ತಯಾರಿಸುವುದು ಎಂದು ಕೊಲೊರಾಡೊ ವಿಶ್ವವಿದ್ಯಾಲಯದ ಪ್ರಧಾನ ಯೋಜನಾ ಸಂಶೋಧಕ ಪ್ರೊ. ಕಾರ್ಲ್ ಲಿಂಡನ್ ತಿಳಿಸಿದ್ದಾರೆ.
ಬಯೋಚಾರ್‌ನ್ನು ಬೆಳೆ ಇಳುವರಿ ಹೆಚ್ಚಳಕ್ಕೆ ಮತ್ತು ಹಸಿರುಮನೆ ಅನಿಲವಾದ ಬೇರ್ಪಡಿಸಿದ ಇಂಗಾಲದ ಡೈಆಕ್ಸೈಡ್ಗೆ ಬಳಸಬಹುದಾಗಿದೆ. ಈ ಬಯೋಚಾರ್ ಅತ್ಯಂತ ಮೌಲ್ಯಯುತ ಸಾಮಗ್ರಿಯಾಗಿದ್ದು, ಇದು ಉತ್ತಮವಾಗಿ ನೀರನ್ನು ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿದೆ. ಕೃಷಿ ಭೂಮಿಯಲ್ಲಿ ಪೌಷ್ಟಿಕ ದ್ರವ್ಯವನ್ನು ಹಿಡಿದಿಡಲು ಮತ್ತು ಮಣ್ಣಿನಲ್ಲಿ ಅಧಿಕ ಸ್ಥಿರತೆ ತರಲು ಇದನ್ನು ಬಳಸಬಹುದು ಎಂದು ಅವರು ಹೇಳಿದ್ದಾರೆ.
ಮಣ್ಣಿನ ಮಿಶ್ರಣವು ಶೇ 10ರಷ್ಟು ಬಯೋಚಾರ್‌ನ್ನು ಒಳಗೊಂಡಿದ್ದು, ಶೇ 50ಕ್ಕೂ ಹೆಚ್ಚಿನ ನೀರನ್ನು ಹಿಡಿದಿಡುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಸಸ್ಯ ಪೌಷ್ಟಿಕತೆಯ ಲಭ್ಯತೆಯನ್ನು ಹೆಚ್ಚಿಸುತ್ತದೆ. ಬಯೋಚಾರ್‌ನ್ನು ಚಾರ್ಕೋಲ್ ಆಗಿ ಸುಡಬಹುದು. ಇದು ವಾಣಿಜ್ಯ ಚಾರ್ಕೋಲ್‌ನಂತೆ ಇಂಧನವನ್ನು ಒದಗಿಸುವುದು ಎಂದು ಅವರು ತಿಳಿಸಿದ್ದಾರೆ.
ಈಗ ತಯಾರಿಸಿರುವ ಶೌಚಾಲಯವು ದಿನವೊಂದರಲ್ಲಿ ನಾಲ್ಕರಿಂದ ಆರು ಜನರಿಗೆ ಬಳಕೆಯಾಗಬಹುದಾಗಿದೆ. ಇನ್ನೂ ಹೆಚ್ಚಿನ ಜನರು ಬಳಸುವ ಸೌಲಭ್ಯದ ದೊಡ್ಡ ಶೌಚಾಲಯದ ನಿರ್ಮಾಣಕ್ಕೆ ವಿನ್ಯಾಸ ಸಿದ್ಧಪಡಿಸಲಾಗಿದೆ. ದಿನವೊಂದಕ್ಕೆ ಐದು ಸೆಂಟ್‌ಗಳ ವೆಚ್ಚದಲ್ಲಿ ಈ ಶೌಚಾಲಯ ಬಳಸುವ ಗುರಿ ಹೊಂದಲಾಗಿದೆ. ದಕ್ಷತೆ ಮತ್ತು ಕಡಿಮೆ ವೆಚ್ಚದ ಸುಧಾರಿತ ಮಾರ್ಗಕ್ಕಾಗಿ ನಿರಂತರ ಪ್ರಯತ್ನ ನಡೆಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.