ADVERTISEMENT

ಷರೀಫ್‌ ಹೇಳಿಕೆ ತಿರುಚಿದ ಅಧಿಕಾರಿಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 19:30 IST
Last Updated 7 ಡಿಸೆಂಬರ್ 2013, 19:30 IST

ಇಸ್ಲಾಮಾಬಾದ್‌(ಪಿಟಿಐ): ಪಾಕ್‌ ಆಕ್ರಮಿತ ಕಾಶ್ಮೀರದ ಬಗ್ಗೆ ಪ್ರಧಾನಿ ನವಾಜ್‌ ಷರೀಫ್‌ ಅವರು  ನೀಡಿದ್ದ ‘ಭಾರತದೊಂದಿಗೆ ನಾಲ್ಕನೇ ಯುದ್ಧಕ್ಕೂ ಸಿದ್ಧ’ ಎಂಬ ಹೇಳಿಕೆ ಸಿದ್ಧಪಡಿಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಾರ್ತಾ ಇಲಾಖೆಯ ಮೂವರು ಅಧಿಕಾರಿಗಳನ್ನು ಶನಿವಾರ ಅಮಾನತು ಮಾಡಲಾಗಿದೆ.

ಈ ಹೇಳಿಕೆಯನ್ನು ಷರೀಫ್‌ ಅವರು ಎಲ್ಲೂ ಪ್ರಸ್ತಾಪಿಸಿಲ್ಲ ಎಂದು ಅವರ ಕಚೇರಿ ನಂತರ ಸ್ಪಷ್ಟಪಡಿಸಿತ್ತು.
ವಾರ್ತಾ ಇಲಾಖೆಯ ಮೂವರು ಅಧಿಕಾರಿಗಳಿಗೆ ‘ಕಳಪೆ ಕೆಲಸದ’ ಕಾರಣ ವೊಡ್ಡಿ ಅಮಾನತುಗೊಳಿಸಲಾಗಿದೆ ಎಂದು ‘ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ವರದಿ ಮಾಡಿದೆ.

ಮಾಧ್ಯಮ ಮಾಹಿತಿ ಇಲಾಖೆಯ ನಿರ್ದೇಶಕ ಅಬ್ದುರ್‌ ರಶೀದ್‌, ಮಾಧ್ಯಮ ಮಾಹಿತಿ ಅಧಿಕಾರಿ ಪರ್ವೇಜ್‌ ಅಹ್ಮದ್‌ ಮತ್ತು ಸಹಾಯಕ ನಿರ್ದೇಶಕ ಖ್ವಾಜಾ ಇಮ್ರಾನ್‌ ಅವರನ್ನು ಅಮಾನತು ಮಾಡಲಾಗಿದೆ. ಅಲ್ಲದೇ, ಮಾಧ್ಯಮಗಳಿಗೆ ಅನವಶ್ಯಕ ಸುದ್ದಿಗಳನ್ನು ಕೊಟ್ಟು ಪ್ರಧಾನಿ ಷರೀಫ್‌ ಅವರಿಗೆ ಮತ್ತು ಸರ್ಕಾರಕ್ಕೆ  ಮುಜುಗರ ಉಂಟು ಮಾಡಿದ್ದೀರಿ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಈ ಬೆಳವಣಿಗೆ ಕುರಿತು ತನಿಖೆ ನಡೆಸಲು ಕೋರಿ ವಾರ್ತಾ ಇಲಾಖೆಗೆ ಮಾಧ್ಯಮ ಮಾಹಿತಿ ಇಲಾಖೆ ಕಾರ್ಯದರ್ಶಿ ಸೆಹ್ಲಾ ವಖಾರ್‌ ವರದಿ ಕಳುಹಿಸಿದ್ದಾರೆ.

ಪ್ರಧಾನಿ ಷರೀಫ್‌ ಅವರ ಹೇಳಿಕೆಯನ್ನು ತಿರುಚಿ, ವಾರ್ತಾ ಇಲಾಖೆಯು ತನ್ನ ಪ್ರಕಟಣೆಯಲ್ಲಿ ‘ಕಾಶ್ಮೀರ ವಿಷಯದ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಇದ್ದರೆ, ಪಾಕಿಸ್ತಾನ ಮತ್ತು ಭಾರತ ನಡುವೆ ನಾಲ್ಕನೇ ಯುದ್ಧವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ’ ಎಂದು ತಿಳಿಸಿತ್ತು.

ಇದಕ್ಕೆ ಭಾರತ ಪ್ರಧಾನಿ ಮನ ಮೋಹನ್‌ ಸಿಂಗ್‌ ಅವರು ಕಟುಭಾಷೆ ಯಲ್ಲಿ ಪ್ರತಿಕ್ರಿಯಿಸಿ, ‘ಪಾಕಿಸ್ತಾನದ ಯಾವುದೇ ದಾಳಿಗೂ ಭಾರತ ಸಿದ್ಧವಿದೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.