ADVERTISEMENT

ಷರೀಫ್‌ ಮಕ್ಕಳಿಗೆ 30 ದಿನ ಸಮಯ ನೀಡಿದ ನ್ಯಾಯಾಲಯ

ಪಿಟಿಐ
Published 12 ಅಕ್ಟೋಬರ್ 2017, 19:30 IST
Last Updated 12 ಅಕ್ಟೋಬರ್ 2017, 19:30 IST
ಷರೀಫ್‌ ಮಕ್ಕಳಿಗೆ 30 ದಿನ ಸಮಯ ನೀಡಿದ ನ್ಯಾಯಾಲಯ
ಷರೀಫ್‌ ಮಕ್ಕಳಿಗೆ 30 ದಿನ ಸಮಯ ನೀಡಿದ ನ್ಯಾಯಾಲಯ   

ಲಾಹೋರ್‌: ಪನಾಮ ದಾಖಲೆ ಸೋರಿಕೆ ಪ್ರಕರಣದಲ್ಲಿ 30 ದಿನದ ಒಳಗಾಗಿ ‍ಹಾಜರಾಗಿ, ಇಲ್ಲದಿದ್ದರೆ ‘ಘೋಷಿತ ಅಪರಾಧಿ’ ಎಂದು ಆದೇಶಿಸುವುದಾಗಿ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ಅವರ ಇಬ್ಬರು ಮಕ್ಕಳಿಗೆ ಇಸ್ಲಾಮಾಬಾದ್‌ನ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವು ಗುರುವಾರ ಎಚ್ಚರಿಕೆ ನೀಡಿದೆ.

‘ಷರೀಫ್‌ ಮಕ್ಕಳಾದ ಹಸ್ಸನ್‌ ಹಾಗೂ ಹುಸ್ಸೇನ್‌ ಅವರು ಅನಾರೋಗ್ಯಪೀಡಿತ ತಾಯಿ ಕುಲ್ಸೂಮ್‌ ಜತೆ ಲಂಡನ್‌ನಲ್ಲಿದ್ದಾರೆ. ಅವರ ವಿರುದ್ಧ ರೆಡ್‌ ವಾರಂಟ್‌ ಜಾರಿಗೊಳಿಸುವ ಪ್ರಕ್ರಿಯೆಯಲ್ಲಿದೆ. ಭ್ರಷ್ಟಾಚಾರ ಹಾಗೂ ಅಕ್ರಮ ಗಣ ವರ್ಗಾವಣೆಗೆ ಸಂಬಂಧಿಸಿದ ಮೂರು ಪ್ರಕರಣಗಳಲ್ಲಿ ಒಂದು ತಿಂಗಳ ಒಳಗಾಗಿ ಹಾಜರಾಗದಿದ್ದರೆ, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಷ್ಟ್ರೀಯ ಉತ್ತರದಾಯಿತ್ವ ಸಂಸ್ಥೆ  (ಎನ್‌ಎಬಿ) ತಿಳಿಸಿದೆ.

‘ನಿಗದಿತ ಗಡುವಿನ ಒಳಗಾಗಿ ನ್ಯಾಯಾಲಯದ ಮುಂದೆ ಹಾಜರಾಗದಿದ್ದರೆ, ಘೋಷಿತ ಅಪರಾಧಿ ಎಂದು ಘೋಷಿಸಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗುವುದು’ ಎಂದು ಎನ್‌ಎಬಿ ಸ್ಪಷ್ಟಪಡಿಸಿದೆ.

ADVERTISEMENT

ನವೆಂಬರ್‌ 10ರ ಒಳಗಾಗಿ ಹಾಜರಾಗುವಂತೆ ಮಾಡೆಲ್‌ ಟೌನ್‌  ಹಾಗೂ ಉಮ್ರಾ ರೈವಿಂಡ್‌ ಮನೆಗಳಿಗೆ ನೋಟಿಸ್‌ ಕಳುಹಿಸಿದ್ದಾರೆ ಎಂದು ಷರೀಫ್ ಕುಟುಂಬಸ್ಥರು ತಿಳಿಸಿದ್ದಾರೆ.

ಇಂದು ದೋಷಾರೋಪ ಸಲ್ಲಿಕೆ: ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ನವಾಜ್‌ ಷರೀಫ್, ಮಗಳು ಮರಿಯಂ ಹಾಗೂ ಅಳಿಯ ಮೊಹಮ್ಮದ್‌ ಸಪ್ದರ್‌ ವಿರುದ್ಧ ದೋಷಾರೋಪಪಟ್ಟಿಯನ್ನು ಶುಕ್ರವಾರ (ಅ.13) ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ.

ಮಗಳು– ಅಳಿಯನಿಗೆ ಜಾಮೀನು: ಇದೇ ಪ್ರಕರಣದಲ್ಲಿ ಷರೀಫ್‌ ಮಗಳು ಮತ್ತು ಅಳಿಯನಿಗೆ ಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದೆ. ನ್ಯಾಯಾಲಯದ ಅನುಮತಿ ಇಲ್ಲದೇ ದೇಶಬಿಟ್ಟು ತೆರಳಬಾರದು, 50 ಸಾವಿರ ಶ್ಯೂರಿಟಿಬಾಂಡ್‌ ಒದಗಿಸುವಂತೆ ಇಬ್ಬರಿಗೆ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.